ಭಾರತೀಯ ಸ್ವಾತಂತ್ರ್ಯ ಹೋರಾಟ - ಗಾಂಧಿಯುಗ

ಭಾರತೀಯ ಸ್ವಾತಂತ್ರ್ಯ ಹೋರಾಟ

ಗಾಂಧಿಯುಗ (1915-1947)

ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ 1915 ರಲ್ಲಿ ಭಾರತಕ್ಕೆ ಹಿಂದಿರುಗಿದರು. ಗೋಪಾಲಕೃಷ್ಣ ಗೋಖಲೆಯವರು ಗಾಂಧಿಯವರ ರಾಜಕೀಯ ಗುರುವಾಗಿದ್ದರು. 1917 ರಲ್ಲಿ ಗಾಂಧೀಜಿ ಗುಜರಾತಿನ ಅಹ್ಮದಾಬಾದಿನಲ್ಲಿ ಸಾಬರಮತಿ ಆಶ್ರಮವನ್ನು ನಿರ್ಮಿಸಿದರು. ಯಂಗ್ ಇಂಡಿಯಾ ಇವರು ನಡೆಸುತ್ತಿದ್ದ ಪತ್ರಿಕೆಯಾಗಿತ್ತು. ಆತ್ಮಕತೆ ಮೈ ಎಕ್ಸ್ಪೆರಿಮೆಂಟ್ ವಿತ್ ದ ಟ್ರುತ್ (ನನ್ನ ಸತ್ಯಾನ್ವೇಷಣೆ) ಎಂಬುದು ಆತ್ಮಕತೆ.

ಗಾಂಧಿಯವರನ್ನು ಸುಭಾಷ್ ಚಂದ್ರ ಭೋಸರು ರಾಷ್ಟ್ರಪಿತ ಎಂತಲೂ, ವಲ್ಲಭಬಾಯಿ ಪಟೇಲ್ ಅವರು ಬಾಪೂಜಿ ಎಂತಲೂ ಕರೆದಿರುವರು. ರವೀಂದ್ರನಾಥ ಠಾಗೂರರು ಗಾಂಧಿಯವರನ್ನು ಮಹಾತ್ಮ ಎಂದು ಕರೆದರೆ, ಗಾಂಧೀಜಿ ಠಾಗೂರರನ್ನು ಗುರುದೇವ ಎಂದು ಕರೆದಿದ್ದಾರೆ.

ಬ್ರಿಟನ್ ಪ್ರಧಾನಿ ಸರ್ ವಿನ್ಸ್ಟನ್ ಚರ್ಚಿಲ್ ಗಾಂಧಿಯವರನ್ನು ಅರೆಬೆತ್ತಲೆ ಫಕೀರ ಎಂದು ಕರೆಯುತ್ತಿದ್ದರು.

ಹೋಂ ರೂಲ್ ಚಳುವಳಿ (1916)

ಅನಿಬೆಸೆಂಟರು ಸ್ವರಾಜ್ಯ ಸ್ಥಾಪನೆ, ಭಾಷಾವಾರು ಪ್ರಾಂತ್ಯಗಳ ರಚನೆ ಮತ್ತು ಭಾರತೀಯ ವೈದಿಕ ಶಿಕ್ಷಣದ ಜಾರಿ ಈ ಅಂಶಗಳನ್ನು ಜಾರಿಗೆ ತರುವುದಕ್ಕಾಗಿ ಹೋಂ ರೂಲ್ ಲೀಗ್ ಚಳುವಳಿಯನ್ನು ಪ್ರಾರಂಭಿಸುವ ಕುರಿತು 1914 ಜನವರಿ 2 ರಂದು ತಮ್ಮ ಕಾಮನ್ ವ್ಹೀಲ್ ಪತ್ರಿಕೆಯಲ್ಲಿ ಪ್ರಕಟಿಸಿದರು. 1916 ಏಪ್ರಿಲ್ ನಲ್ಲಿ ಬಾಲಗಂಗಾಧರ ತಿಲಕರು ಬಾಂಬೆಯಲ್ಲಿ (ಮಹಾರಾಷ್ಟ್ರ) ಹೋಂ ರೂಲ್ ಚಳುವಳಿಯನ್ನು ಪ್ರಾರಂಭಿಸಿದರು. ಈ ಚಳುವಳಿಯಿಂದ ಅವರು ಲೋಕಮಾನ್ಯ ಎಂದೇ ಪ್ರಸಿದ್ಧಿಯಾದರು. 1916 ಸೆಪ್ಟೆಂಬರ್ ನಲ್ಲಿ ಅನಿಬೆಸೆಂಟರು ಮದ್ರಾಸಿನಲ್ಲಿ ಹೋಂ ರೂಲ್ ಚಳುವಳಿಯನ್ನು ಪ್ರಾರಂಭಿಸಿದರು.

ಲಖ್ನೊ ಒಪ್ಪಂದ (1916)

1914 ರಿಂದ 1918 ರ ವರೆಗೆ ನಡೆದ ಮೊದಲನೇ ವಿಶ್ವಯುದ್ಧದಲ್ಲಿ ಬ್ರಿಟೀಷ್ ಸರ್ಕಾರವು ಭಾರತೀಯ ಪ್ರಮುಖರ ಜೊತೆ ಚರ್ಚಿಸದೆ ಭಾರತೀಯ ಸೈನಿಕರನ್ನು ಯುದ್ಧದಲ್ಲಿ ತೊಡಗಿಸಿಕೊಂಡಿತು. ಇದರಿಂದಾಗಿ ಅನೇಕ ಭಾರತೀಯ ಸೈನಿಕರು ಯುದ್ಧದಲ್ಲಿ ಮರಣಿಸಿದರು. ಬ್ರಿಟೀಷ್ ಸರ್ಕಾರದ ಈ ನೀತಿಯನ್ನು ಕಾಂಗ್ರೆಸ್ಸಿನ ಸೌಮ್ಯವಾದಿಗಳು, ಉಗ್ರವಾದಿಗಳು ಹಾಗೂ ಮುಸ್ಲಿಂ ಲೀಗ್ ವಿರೋಧಿಸಿತು. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಈ ಎರಡೂ ಸಂಘಗಳು ಏಕಕಾಲಕ್ಕೆ 1916 ಡಿಸೆಂಬರ್ ನಲ್ಲಿ ಲಖ್ನೊದಲ್ಲಿ ವಾರ್ಷಿಕ ಸಮ್ಮೇಳನಗಳನ್ನು ಹಮ್ಮಿಕೊಂಡವು. ಈ ಸಮ್ಮೇಳನಗಳು ಜಂಟಿಯಾಗಿ ನಡೆದು ಸಂವಿಧಾನಾತ್ಮಕ ಸುಧಾರಣೆಗಾಗಿ ಲಖ್ನೋ ಒಪ್ಪಂದ ಮಾಡಿಕೊಂಡವು. ಅನಿಬೆಸೆಂಟ್ ಮತ್ತು ಬಾಲ ಗಂಗಾಧರ ತಿಲಕರು ಈ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಮೈಸೂರಿನ ದಿವಾನರಾಗಿದ್ದ ವಿ.ಪಿ ಮಾಧವರಾವರು ಈ ಜಂಟಿ ಅಧಿವೇಷನದಲ್ಲಿ ಭಾಗವಹಿಸಿದ್ದರು.

ಆಗಸ್ಟ್ ಘೋಷಣೆ (1917)

ಭಾರತೀಯರಿಗೆ ಸ್ವಯಂ ಸರ್ಕಾರ ನೀಡುವುದು ಮತ್ತು ಆಡಳಿತದಲ್ಲಿ ಭಾರತಿಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದರ ಕುರಿತು 1917 ಆಗಸ್ಟ್ 20 ರಂದು ಭಾರತದ ಕಾರ್ಯದರ್ಶಿ ಮಾಂಟೆಗೋ ಬ್ರಿಟನ್ ಸದನದಲ್ಲಿ ಮಂಡಿಸಿದ ವರದಿಯನ್ನು ಆಗಸ್ಟ್ ಘೋಷಣೆ ಎನ್ನುವರು. 1918 ರಲ್ಲಿ ಬಾಂಬೆಯಲ್ಲಿ ನಡೆದ ವಿಶೇಷ ಕಾಂಗ್ರೆಸ್ ಅಧಿವೇಶನಕ್ಕೆ ಸೈಯದ್ ಹಸನ್ ಇಮಾಮ್ ಅಧ್ಯಕ್ಷತೆ ವಹಿಸಿದ್ದರು. ಈ ಅಧಿವೇಶನದಲ್ಲಿ ಆಗಸ್ಟ್ ಘೋಷಣೆ ಭಾರತೀಯರಿಗೆ ಅನುಕೂಲಕರವಾಗಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಈ ಘೋಷಣೆಯನ್ನು ವಿರೋಧಿಸಿತು.

ಚಂಪಾರಣ್ ಸತ್ಯಾಗ್ರಹ (1917)

1917 ರಲ್ಲಿ ಬಿಹಾರದ ಚಂಪಾರಣ್ಯ ಪ್ರದೇಶದಲ್ಲಿ ಬ್ರ್ರಿಟೀಷರ ಅತಿಯಾದ ತೆರಿಗೆಯಿಂದ ತೊಂದರೆಗೊಳಗಾಗಿದ್ದ ನೀಲಿ ಬೆಳೆಗಾರರ ಸಮಸ್ಯೆಯನ್ನು ಪರಿಹರಿಸಲು ಗಾಂಧೀಜಿ ಸತ್ಯಾಗ್ರಹಕ್ಕಿಳಿದರು. ಈ ಹೋರಾಟದ ಮೂಲಕ ಬಾಬು ರಾಜೇಂದ್ರ ಪ್ರಸಾದ್ ಅವರು ಗುರ್ತಿಸಿಕೊಂಡರು. ಈ ಚಳುವಳಿಯ ಕುರಿತು ದೀನಬಂಧುಮಿತ್ರ ಅವರು ನೀಲಿದರ್ಪಣ್ ಎಂಬ ಕೃತಿಯನ್ನು ಬರೆದಿದ್ದಾರೆ.

ಖೇಡಾ ಸತ್ಯಾಗ್ರಹ (1918)

1918 ಮಾರ್ಚ್ 22 ರಲ್ಲಿ ಗುಜರಾತಿನ ಖೇಡಾದಲ್ಲಿ ನೇಯ್ಗೆ ಕಾರ್ಮಿಕರ ಪರವಾಗಿ ಗಾಂಧೀಜಿ ಸತ್ಯಾಗ್ರಹಕ್ಕಿಳಿದರು. ಈ ಹೋರಾಟದ ಮೂಲಕ ವಲ್ಲಭಬಾಯಿ ಪಟೇಲ್ ಬೆಳಕಿಗೆ ಬಂದರು. ವಲ್ಲಭಬಾಯಿಯವರ ವರ್ಚಸ್ಸನ್ನು ಕಂಡು ಗಾಂಧಿಯವರು ಪಟೇಲರಿಗೆ ಸರ್ದಾರ್ ಎಂಬ ಬಿರುದು ನೀಡಿದರು. ಇದು ಭಾರತದ ಮೊದಲ ಅಸಹಕಾರ ಚಳುವಳಿ ಎನಿಸಿದೆ.

ರೌಲಟ್ ಕಾಯ್ದೆ (1919)

ಭಾರತೀಯ ಕ್ರಾಂತಿಕಾರರ ಚಟುವಟಿಕೆಗಳನ್ನುನಿಯಂತ್ರಿಸಲು ಬ್ರಿಟಿಷ್ ಸರ್ಕಾರವು ನ್ಯಾಯಮುರ್ತಿಯಾದ ರೌಲಟ್ ಅವರ ನೇತೃತ್ವದಲ್ಲಿ 1917 ರಲ್ಲಿ ಒಂದು ಸಮಿತಿಯನ್ನು ರಚಿಸಿತು. ಈ ಸಮಿತಿಯನ್ವಯ 1919 ರಲ್ಲಿ ರೌಲಟ್ ಕಾಯಿದೆಯನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯ ಅಡಿಯಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ನಿಯಂತ್ರಿಸುವುದು, ಸ್ವಾತಂತ್ರ್ಯ ಹೋರಾಟಗಾರರನ್ನು ವಿಚಾರಣೆಯಿಲ್ಲದೆ ಬಂಧನದಲ್ಲಿಡುವುದು, ರಾಜದ್ರೋಹದ ಸಂಶಯಕ್ಕೊಳಗಾದ ಯಾವುದೇ ವ್ಯಕ್ತಿಯನ್ನು ವಾರಂಟ್ ಇಲ್ಲದೆ ಬಂಧಿಸುವುದು ಇಂಥ ವಿಶೇಷಾಧಿಕಾರಗಳನ್ನು ವೈಸ್ರಾಯ್ ಗೆ ನೀಡಲಾಯಿತು. ಇದನ್ನು ವಿರೋಧಿಸಿ 1919 ಏಪ್ರಿಲ್ 6 ರಂದು ಗಾಂಧಿ ಭಾರತಾದ್ಯಂತ ರಾಷ್ಟ್ರೀಯ ಹರತಾಳಕ್ಕೆ ಕರೆ ನೀಡಿದರು.

ಜಲಿಯನ್ ವಾಲಾಬಾಗ್ ಹತ್ಯಾಕಾಂಡ (1919)

13 ಏಪ್ರಿಲ್ 1919 ರಂದು ಮಾರ್ಷಲ್ ಲಾ (ಮಿಲಿಟರಿ ಕಾನೂನು) ಜಾರಿಯಾಗಿರುವ ಸಂಗತಿ ತಿಳಿಯದ ಸಿಖ್ಖರು ಪಂಜಾಬಿನ ಅಮೃತಸರದ ಜಲಿಯನ್ ವಾಲಾಬಾಗ್ ನಲ್ಲಿ ಸಿಖ್ ಹಬ್ಬವಾದ ಬೈಸಾಖಿಯನ್ನು ಆಚರಿಸಲು ಸಭೆ ಸೇರಿದ್ದರು. ಹಬ್ಬದ ಆಚರಣೆಯ ರೂಪದಲ್ಲಿ ಬ್ರಿಟಿಷರಿಂದ ಬಂಧನಕ್ಕೊಳಗಾಗಿದ್ದ ಡಾ. ಕಿಚ್ಲೂ ಮತ್ತು ಡಾ. ಸತ್ಯಪಾಲರ ಬಿಡುಗಡೆಗಾಗಿ ಹಮ್ಮಿಕೊಂಡಿದ್ದ ಶಾಂತಿಯುತ ಪ್ರತಿಭಟನೆಯ ಸಮಾವೇಶ ಇದಾಗಿತ್ತು. ಬ್ರಿಟಿಷ್ ಜನರಲ್ ರೆಜಿನಾಲ್ಡ್ ಡೈಯರ್ ನು ಸುಮಾರು ಹತ್ತು ಸಾವಿರ ನಿಶ್ಶಸ್ತ್ರ ಮತ್ತು ಅಮಾಯಕ ಜನರ ಮೇಲೆ ಗುಂಡು ಹಾರಿಸಲು ತನ್ನ ಸೈನಿಕರಿಗೆ ಆಜ್ಞೆ ನೀಡಿದನು.

ಈ ಘಟನೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳಾದವು. ಗಾಂಧಿಯವರು ಈ ಘಟನೆಯನ್ನು ಹಿಮಾಲಯನ್ ಬ್ಲಂಡರ್ ಎಂದು ಕರೆದಿದ್ದಾರೆ. ಈ ಹತ್ಯಾಕಾಂಡದ ವಿಚಾರಣೆಗಾಗಿ ಹಂಟರ್ ಆಯೋಗವನ್ನು ನೇಮಿಸಲಾಯಿತು. ಕ್ರಾಂತಿಕಾರಿ ಉದಾಂ ಸಿಂಗ್ ಜನರಲ್ ಡಯರ್ ನನ್ನು ಹತ್ಯೆಮಾಡಿ ಈ ದುರಂತಕ್ಕೆ ಪ್ರತೀಕಾರ ತೀರಿಸಿಕೊಂಡನು.

ಖಿಲಾಫತ್ ಚಳುವಳಿ (1920)

ಮೊದಲನೇ ವಿಶ್ವಯುದ್ಧದಲ್ಲಿ ಸೋತ ಟರ್ಕಿ ಬ್ರಿಟೀಷರ ವಶವಾಯಿತು. ಬ್ರಿಟೀಷರು ಟರ್ಕಿಯ ಖಲೀಫನನ್ನು ಅಧಿಕಾರದಿಂದ ಕೆಳಗಿಳಿಸಿ ಕಮಲ್ ಪಾಷಾ ಎಂಬುವವನಿಗೆ ಅಧಿಕಾರ ನೀಡಿದರು. ಇದರ ವಿರುದ್ಧ ಭಾರತದ ಮುಸ್ಲಿಂರು ಮಹ್ಮದ್ ಅಲಿ ಮತ್ತು ಶೌಕತ್ ಅಲಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಗಾಂಧೀಜಿ ಈ ಚಳುವಳಿಗೆ ಬೆಂಬಲ ನೀಡಿದರು, ಆದರೆ ಜಿನ್ನಾ ಸ್ವಾತಂತ್ರ್ಯ ಹೋರಾಟದಲ್ಲಿ ಧರ್ಮವನ್ನು ಮಧ್ಯೆ ತರಬಾರದೆಂದು ಈ ಚಳುವಳಿಯನ್ನು ವಿರೋಧಿಸಿದರು.

ಅಸಹಕಾರ ಚಳುವಳಿ (1920)

ಮಹಾರಾಷ್ಟ್ರದ ನಾಗಪುರದಲ್ಲಿ ವಿಜಯ ರಾಘವಾಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಷನದಲ್ಲಿ ಈ ಚಳುವಳಿಯ ನಿರ್ಣಯ ಕೈಗೊಳ್ಳಲಾಯಿತು. ಗಾಂಧಿಯವರು ವಿದೇಶಿ ವಸ್ತುಗಳ ಬಹಿಷ್ಕಾರ ಮತ್ತು ಸ್ವದೇಶಿ ವಸ್ತುಗಳಿಗೆ ಬೆಂಬಲ ನೀಡುವಂತೆ ಕರೆ ನೀಡಿದರು

ಗಾಂಧೀಜಿ ಖೈಸರ್ ಎ ಹಿಂದ್ ಮತ್ತು ಠಾಗೂರರು ನೈಟ್ ಹುಡ್ ಬಿರುದುಗಳನ್ನು ಬ್ರಿಟಿಷರಿಗೆ ಹಿಂದಿರುಗಿಸಿದರು. ಅನೇಕ ಭಾರತೀಯರು ಬ್ರಿಟೀಷರು ನೀಡಿದ ಬಿರುದುಗಳನ್ನು ಹಿಂದಿರುಗಿಸಿದರು. ಬ್ರಿಟೀಷರ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರನೇಕರು ಕೆಲಸವನ್ನು ತ್ಯಜಿಸಿದರು. ಇದರ ಪರಿಣಾಮ ದೇಶಾದ್ಯಂತ ಹರಡಿತು.

ಚೌರಿಚೌರಾ ಘಟನೆ (1922)

ಉತ್ತರ ಪ್ರದೇಶದ ಗೋರಖ್‍ಪುರ ಜಿಲ್ಲೆಯ ಚೌರಿಚೌರಾ ಎಂಬಲ್ಲಿ ಪ್ರತಿಭಟನಾಕಾರರು 1922 ಫೆಬ್ರವರಿ 5 ರಂದು ಪೊಲಿಸ್ ಠಾಣೆಗೆ ಬೆಂಕಿ ಇಟ್ಟರು. ಈ ಹಿಂಸೆಯಲ್ಲಿ 20ಕ್ಕೂ ಅಧಿಕ ಪೊಲೀಸರು ಮೃತರಾದರು. ಈ ಘಟನೆಯನ್ನು ಸುಭಾಷ್ ಚಂದ್ರ ಬೋಸರು ರಾಷ್ಟ್ರೀಯ ಪ್ರಕೋಪ ಎಂದು ಕರೆದಿದ್ದಾರೆ. ಈ ಘಟನೆಯಿಂದ ನೊಂದ ಗಾಂಧಿ ಬಾರ್ಡೋಲಿ ಘೋಷಣೆಯ ಮೂಲಕ ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಂಡರು.

ಸ್ವರಾಜ್ಯ ಪಕ್ಷ (1923)

ಚಿತ್ತರಂಜನ್ ದಾಸ್ ಮತ್ತು ಮೋತಿಲಾಲ್ ನೆಹರು ಅವರು ಕಾಂಗ್ರೆಸ್ ನಿಂದ ಹೊರಬಂದು 1923 ರಲ್ಲಿ ಸ್ವರಾಜ್ಯ ಪಕ್ಷವನ್ನು ಸ್ಥಾಪಿಸಿದರು. ಇದರ ಉದ್ದೇಶ ಸ್ವಾತಂತ್ರ್ಯ ಗಳಿಕೆ ಮತ್ತು ಸ್ವಾಯತ್ತ ಸರ್ಕಾರದ ಸ್ಥಾಪನೆ. 1926 ರಲ್ಲಿ ನಡೆದ ಚುನಾವಣೆಯಲ್ಲಿ ಸ್ವರಾಜ್ಯ ಪಕ್ಷ ಸೋಲನ್ನನುಭವಿಸಿತು. 1930 ರಲ್ಲಿ ಲಾಹೊರ್ ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವರಾಜ್ಯ ಪಕ್ಷವು ಸರೋಜಿನಿ ನಾಯ್ಡು ಅವರ ಮಧ್ಯಸ್ತಿಕೆಯಲ್ಲಿ ಮತ್ತೇ ಕಾಂಗ್ರೇಸ್ ಅನ್ನು ಸೇರಿತು.

ಸೈಮನ್ ಆಯೋಗ (1927)

1919 ರ ಮಾಂಟೆಗೊ ಚೆಲ್ಮ್ಸ್ ಫರ್ಡ್ ಕಾಯಿದೆ ಭಾರತದಲ್ಲಿ ಹೇಗೆ ಕಾರ್ಯಗತಗೊಂಡಿದೆ ಎಂಬುದರ ಜೊತೆಗೆ ಭಾರತೀಯರಿಗೆ ಸಂವಿಧಾನವನ್ನು ರಚಿಸಿಕೊಡುವ ಉದ್ದೇಶದಿಂದ ಸೈಮನ್ ಆಯೋಗ 1927 ನವೆಂಬರ್ 8 ರಂದು ಭಾರತಕ್ಕೆ ಬಂದಿತು. ಭಾರತದ ರಾಜ್ಯಕಾರ್ಯದರ್ಶಿಯಾಗಿದ್ದ ಲಾರ್ಡ್ ಬಿರ್ಕೆನ್ ಹೆಡ್ ಈ ಆಯೋಗವನ್ನು ಘೋಷಿಸಿದರು.

ಈ ಆಯೋಗವು ಕೇವಲ ಬ್ರಿಟೀಷರಿಂದ ಕೂಡಿದೆ ಎಂಬ ಕಾರಣದಿಂದ ಭಾರತೀಯರು ಅದನ್ನು ವಿರೋಧಿಸಿದರು. ಈ ಆಯೋಗದ ವಿರುದ್ಧ ಪ್ರತಿಭಟನೆ ನಡೆಸುವಾಗ ಲಾಲಾ ಲಜಪತರಾಯರು ಸ್ಯಾಂಡರ್ಸ್ ಎಂಬ ಅಧಿಕಾರಿಯಿಂದ ಹತರಾದರು.

ಮೋತಿಲಾಲ್ ನೆಹರು ವರದಿ (1928)

ಸೈಮನ್ ಆಯೋಗವನ್ನು ಭಾರತೀಯರು ತಿರಸ್ಕರಿಸಿದ ನಂತರ ಬ್ರಿಟಿಷ್ ಸರ್ಕಾರವು ಎಲ್ಲರೂ ಒಪ್ಪುವಂತಹ ಸಂವಿಧಾನವನ್ನು ರಚಿಸಿ ತೋರಿಸುವಂತೆ ಭಾರತೀಯರಿಗೆ ಸವಾಲು ಹಾಕಿತು. 1928 ಮೇ 19 ರಂದು ದೆಹಲಿಯಲ್ಲಿ ಸರ್ವಪಕ್ಷಗಳ ಸಮ್ಮೇಳನ ನಡೆಯಿತು. ಈ ಸಭೆಯಲ್ಲಿ ಮೋತಿಲಾಲ್ ನೆಹರು ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಯಿತು. ಸ್ವಯಂ ಆಡಳಿತ ಮತ್ತು ಸಂಪೂರ್ಣ ಸ್ವಾತಂತ್ರ್ಯ ಈ ಸಮಿತಿಯ ಉದ್ದೇಶಗಳಾಗಿದ್ದವು. ಈ ಸಮಿತಿಯು 1928 ಆಗಸ್ಟ್ 10 ರಂದು ತನ್ನ ವರದಿಯನ್ನು ಸಲ್ಲಿಸಿತು.

1928 ಡಿಸೆಂಬರ್ ನಲ್ಲಿ ಕಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ನೆಹರು ಅವರ ವರದಿಯನ್ನು ಅನುಮೋದಿಸಲಾಯಿತು. 1929 ಡಿಸೆಂಬರ್ 31 ರಂದು ಬ್ರಿಟಿಷ್ ಸರ್ಕಾರ ಸಹ ಈ ವರದಿಯನ್ನು ಸ್ವೀಕರಿಸಿತು. ಆದರೆ ಅಲಿ ಸಹೋದರರ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ಮುಸ್ಲಿಂ ಲೀಗ್ ನ ಅಧಿವೇಶನದಲ್ಲಿ ಮುಸ್ಲಿಂ ಲೀಗ್ ಈ ವರದಿಯನ್ನು ತಿರಸ್ಕರಿಸಿತು. ಮಹ್ಮದ್ ಅಲಿ ಜಿನ್ನಾ ತನ್ನ 14 ಅಂಶಗಳನ್ನು ಸೇರಿಸಿದರೆ ಮಾತ್ರ ವರದಿಯನ್ನು ಒಪ್ಪಿಕೊಳ್ಳುವುದಾಗಿ ಹೇಳಿದರು.

ಬಾರ್ಡೋಲಿ ಸತ್ಯಾಗ್ರಹ (1928)

ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ನೇತೃತ್ವದಲ್ಲಿ ಗುಜರಾತಿನ ಬಾರ್ಡೋಲಿ ಎಂಬಲ್ಲಿ ರೈತರ ಭೂಕಂದಾಯದ ವಿರುದ್ಧ ನಡೆದ ದಂಗೆಯಾಗಿದೆ. ಈ ಚಳುವಳಿಯ ಸಂದರ್ಭದಲ್ಲಿ ಪಟೇಲರು ಸತ್ಯಾಗ್ರಹ ಎಂಬ ಪತ್ರಿಕೆಯನ್ನು ಹೊರಡಿಸಿದರು.

ಪೂರ್ಣ ಸ್ವರಾಜ್ಯ ಘೋಷಣೆ (1929)

ಡಿಸೆಂಬರ್ 1929 ರ ಲಾಹೋರ್ ಅಧಿವೇಶನದಲ್ಲಿ ಜವಾಹರಲಾಲ್ ನೆಹರು ಅವರ ಅಧ್ಯಕ್ಷತೆಯಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಬ್ರಿಟಿಷರಿಂದ ಸಂಪೂರ್ಣ ಸ್ವಾತಂತ್ರ್ಯ ಗಳಿಸುವ ಕುರಿತು ನಿರ್ಣಯವನ್ನು ಅಂಗೀಕರಿಸಿತು. 26 ಜನವರಿ 1930 ಅನ್ನು ಪೂರ್ಣ ಸ್ವರಾಜ್ಯ ದಿನ ಎಂದು ದೇಶಾದ್ಯಂತ ಆಚರಿಸಲು ನಿರ್ಧರಿಸಲಾಯಿತು.

ಕಾನೂನುಭಂಗ ಚಳುವಳಿ (1930)

ಉಪ್ಪಿನ ಮೇಲಿನ ಬ್ರಿಟಿಷರು ವಿಧಿಸಿದ ತೆರಿಗೆಗಳನ್ನು ಪ್ರತಿಭಟಿಸಿ ಭಾರತಾದ್ಯಂತ ಪ್ರತಿಭಟನೆಗಳಾದವು. ಗಾಂಧಿಯವರು 1930 ರ ಮಾರ್ಚ್ 12 ರಂದು ಸಾಬರಮತಿ ಆಶ್ರಮದಿಂದ ಸುಮಾರು 375 ಕಿ.ಮೀ ದೂರದ ದಂಡಿ ವರೆಗೆ ದಂಡಿ ಯಾತ್ರೆ ಕೈಗೊಂಡರು. ಇದನ್ನೇ ಉಪ್ಪಿನ ಸತ್ಯಾಗ್ರಹ ಎನ್ನುವರು. ತನ್ನ ಅನುಯಾಯಿಗಳೊಂದಿಗೆ ಏಪ್ರಿಲ್ 6 ರಂದು ದಂಡಿಯನ್ನು ತಲುಪಿದ ಗಾಂಧಿ ಸಮುದ್ರದ ನೀರಿನಿಂದ ಉಪ್ಪನ್ನು ತಯಾರಿಸಿ ಉಪ್ಪಿನ ಕಾನೂನನ್ನು ಮುರಿದರು. ಏಪ್ರಿಲ್ 6 ರಿಂದ 13 ರ ವರೆಗಿನ ಈ ಕಾಲವನ್ನು ಕಾನೂನು ಭಂಗದ ರಾಷ್ಟ್ರೀಯ ವಾರ ಎನ್ನುವರು. ಈ ಸತ್ಯಾಗ್ರಹದಲ್ಲಿ ಕರ್ನಾಟಕದಿಂದ 18 ವರ್ಷದ ಮೈಲಾರ ಮಹದೇವಪ್ಪ ಎಂಬುವವರು ಭಾಗವಹಿಸಿದ್ದರು.

ಉಪ್ಪಿನ ಸತ್ಯಾಗ್ರಹ ನಡೆದ ಇತರ ಸ್ಥಳಗಳು

ತಮಿಳುನಾಡಿನ ತಿರುಚನಾಪಳ್ಳಿಯ ವೇದಾರಣ್ಯಂ - ಸಿ ರಾಜಗೋಪಾಲಚಾರಿ 

ಬಾಂಬೆ - ಸರೋಜಿನಿ ನಾಯ್ಡು 

ಕೇರಳದ ಕ್ಯಾಲಿಕಟ್ ನ ಪಯ್ಯಾನುರ್ - ಕೆ.ಕೇಲಪ್ಪನ್ 

ಕರ್ನಾಟಕದ ಅಂಕೋಲಾ - ಎಂ ಪಿ ನಾಡಕರ್ಣಿ

ದುಂಡುಮೇಜಿನ ಪರಿಷತ್ತುಗಳು (19301932)

ಭಾರತದಲ್ಲಿ ಸಂವಿಧಾನಾತ್ಮಕ ತಿದ್ದುಪಡಿಗಳನ್ನು ತರಲು ದುಂಡುಮೇಜಿನ ಪರಿಷತ್ತುಗಳನ್ನು ನಡೆಸಲಾಯಿತು. ಈ ಮೂರೂ ದುಂಡುಮೇಜಿನ ಪರಿಷತ್ತುಗಳು ಲಂಡನ್ ನಲ್ಲಿ ನಡೆದವು. ಈ ಸಭೆಗಳ ಅಧ್ಯಕ್ಷತೆ ವಹಿಸಿಕೊಂಡವರು ಬ್ರಿಟನ್ ಪ್ರಧಾನಿ ರಾಂಸೆ ಮ್ಯಾಕ್ ಡೊನಾಲ್ಡ್.

ಗಾಂಧಿಯವರು ಜೈಲಿನಲ್ಲಿದ್ದಾಗ ಲಂಡನ್ನಿನಲ್ಲಿ 1930 ರ ನವೆಂಬರ್ 12 ರಂದು ಮೊದಲ ದುಂಡು ಮೇಜಿನ ಪರಿಷತ್ತು ನಡೆಯಿತು. ಆ ಸಭೆಯಲ್ಲಿ ಕಾಂಗ್ರೆಸ್ ಭಾಗವಹಿಸದ ಕಾರಣ ಈ ಸಭೆ ವಿಫಲವಾಯಿತು. 1931 ಮಾರ್ಚ್ 5 ರಂದು ದೆಹಲಿಯಲ್ಲಿ ಗಾಂಧಿ ಇರ್ವಿನ್ ಒಪ್ಪಂದವಾಯಿತು. ಭಾರತೀಯ ರಾಜಕೀಯ ಖೈದಿಗಳನ್ನು ಬಿಡುಗಡೆ ಮಾಡುವುದು, ತುರ್ತುಪರಿಸ್ಥಿತಿಯ ಸಮಯದಲ್ಲಿ ಹೊರಡಿಸುವ ಸುಗ್ರೀವಾಜ್ಞೆಗಳನ್ನು ವಾಪಸ್ಸು ತೆಗೆದುಕೊಳ್ಳುವುದು, ಶಾಂತಿಯುತ ಪ್ರತಿಭಟನೆಗೆ ಅವಕಾಶ ಮಾಡಿಕೊಡುವುದು ಮುಂತಾದವು ಈ ಒಪ್ಪಂದದ ಅಂಶಗಳಾಗಿದ್ದವು.

ಎರಡನೇ ದುಂಡು ಮೇಜಿನ ಪರಿಷತ್ತು 1931 ಸೆಪ್ಟೆಂಬರ್ 7 ರಂದು ನಡೆಯಿತು. ಈ ಪರಿಷತ್ತಿನಲ್ಲಿ ಕಾಂಗ್ರೆಸ್ಸಿನ ಏಕೈಕ ಪ್ರತಿನಿಧಿಯಾಗಿ ಗಾಂಧೀಜಿ ಭಾಗವಹಿಸಿದರು. ಜಿನ್ನಾರವರು ಪ್ರತ್ಯೇಕ ಮುಸ್ಲಿಂ ಪ್ರಾತಿನಿಧ್ಯಕ್ಕಾಗಿ ಮತ್ತು ಅಂಬೇಡ್ಕರ್ ಪ್ರತ್ಯೇಕ ದಲಿತ ಪ್ರಾತಿನಿಧ್ಯಕ್ಕಾಗಿ ಬೇಡಿಕೆ ಇಟ್ಟರು. 1932 ಆಗಸ್ಟ್ 16 ರಂದು ಮ್ಯಾಕ್ ಡೊನಾಲ್ಡ್ ಪ್ರತ್ಯೇಕ ಚುನಾವಣಾ ಕ್ಷೇತ್ರಗಳಿಗೆ ಅನುಮತಿ ನೀಡಿದನು. ಇದನ್ನು ಮತೀಯ ತೀರ್ಪು ಎಂದು ಕರೆಯಲಾಗಿದೆ. ಇದರ ವಿರುದ್ಧ ಗಾಂಧಿ ಯರವಾಡ ಜೈಲಿನಲ್ಲಿ ಉಪವಾಸ ಕೈಗೊಂಡರು. ಗಾಂಧಿ ಮತ್ತು ಜಿನ್ನಾ - ಅಂಬೇಡ್ಕರ್ ಮಧ್ಯೆ ವಿಭೇದಗಳುಂಟಾಗಿ ಚರ್ಚೆ ವಿಫಲವಾಯಿತು. ಕೊನೆಗೆ ಮದನ ಮೋಹನ ಮಾಳವೀಯರ ಮಧ್ಯಸ್ಥಿಕೆಯಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಮಧ್ಯೆ 1935 ಸೆಪ್ಟೆಂಬರ್ 25 ರಂದು ಪೂನಾ ಒಪ್ಪಂದವಾಯಿತು. ಈ ಒಪ್ಪಂದದನ್ವಯ ಚುನಾವಣೆಗೆ ನಿಲ್ಲುವ ದಲಿತರ ಸಂಖ್ಯೆಯನ್ನು 71 ರಿಂದ 148 ಕ್ಕೆ ಏರಿಸಲಾಯಿತು. ಆದರೆ ಮುಸ್ಲಿಂ ಪ್ರಾತಿನಿಧ್ಯಕ್ಕಾಗಿ ಬೇಡಿಕೆ ಇಟ್ಟ ಜಿನ್ನಾ ಅವರು ರಾಜಿಯಾಗಲಿಲ್ಲ.

2ನೇ ಸಮ್ಮೇಳನದಲ್ಲಿ ಕರ್ನಾಟಕದಿಂದ ಸರ್ ಮಿರ್ಜಾ ಇಸ್ಮಾಯಿಲ್ ಮತ್ತು ಕಾರ್ಮಿಕ ಸಂಘದ ಪರವಾಗಿ ವಿ ವಿ ಗಿರಿಯವರು (ವರಾಹಗಿರಿ ವೆಂಕಟಗಿರಿ) ಭಾಗವಹಿಸಿದ್ದರು.

1932 ರಲ್ಲಿ ಗಾಂಧಿ ಹರಿಜನ ಸೇವಾ ಸಂಘವನ್ನು ಸ್ಥಾಪಿಸಿದರು, ಹರಿಜನ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. 1934ಲ್ಲಿ ಗಾಂಧೀಜಿಯವರು ಅಸ್ಪೃಶ್ಯತಾ ನಿವಾರಣಾ ಚಳುವಳಿಯನ್ನು ಪ್ರಾರಂಭಿಸಿದರು.

ಮೂರನೇ ದುಂಡುಮೇಜಿನ ಸಭೆ 1932 ನವೆಂಬರ್ 17 ರಂದು ನಡೆಯಿತು. 2ನೇ ದುಂಡುಮೇಜಿನ ಸಭೆಯಲ್ಲುಂಟಾದ ವಿಭೇದಗಳಿಂದ ಬ್ರಿಟನ್ನಿನ ಲೇಬರ್ ಪಕ್ಷ, ಭಾರತದ ಕಾರ್ಮಿಕ ಪಕ್ಷ ಮತ್ತು ಕಾಂಗ್ರೆಸ್ ಗಳು ಈ ಸಭೆಯಲ್ಲಿ ಭಾಗವಹಿಸಲಿಲ್ಲ. ಅಂತಿಮವಾಗಿ ಯಾವ ದುಂಡುಮೇಜಿನ ಸಭೆಯು ಸಹ ಫಲಕಾರಿಯಾಗಲಿಲ್ಲ.

ಸಮಾಜವಾದಿಗಳು (1934)

1934 ರಲ್ಲಿ ಬಾಂಬೆಯಲ್ಲಿ ಡಾ ಬಾಬು ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಿತು. ಈ ಅಧಿವೇಶನದಲ್ಲಿ ಸಮಾಜವಾದಿ ಬಣ ಕಾಣಿಸಿಕೊಂಡು ಕಾಂಗ್ರೆಸ್ ನಿಂದ ಹೊರಬಂದಿತು. ಜಯಪ್ರಕಾಶ್ ನಾರಾಯಣ ಮತ್ತು ಆಚಾರ್ಯ ನರೇಂದ್ರದೇವ ಇದರ ಸಂಸ್ಥಾಪಕರಾಗಿದ್ದರು. ಜಯಪ್ರಕಾಶ್ ನಾರಾಯಣರನ್ನು ಲೋಕನಾಯಕ ಎಂದು ಕರೆಯುತ್ತಿದ್ದರು.

ಭಾರತ ಸರ್ಕಾರ ಕಾಯ್ದೆ (1935)

ದುಂಡುಮೇಜಿನ ಪರಿಷತ್ತುಗಳು ವಿಫಲವಾದ ನಂತರ ಭಾರತದಲ್ಲಿ ಸಂವಿಧಾನಾತ್ಮಕ ಸುಧಾರಣೆ ತರಲು ಬ್ರಿಟೀಷರು 1935 ರಲ್ಲಿ ಭಾರತ ಸರ್ಕಾರ ಕಾಯ್ದೆಯನ್ನು ಹೊರಡಿಸಿದರು.

ಪ್ರಾಂತ್ಯಗಳಿಗೆ ಹೆಚ್ಚು ಸ್ವಾತಂತ್ರ್ಯ, ಕೇಂದ್ರಾಡಳಿತದ ಸಡಿಲತೆ ಮತ್ತು ಅಲ್ಪಸಂಖ್ಯಾತರ ಹಿತರಕ್ಷಣೆ. ಈ ಅಂಶಗಳನ್ನು ಆಧರಿಸಿ 1937 ರ ಫೆಬ್ರವರಿಯಲ್ಲಿ ಪ್ರಾಂತೀಯ ಚುನಾವಣೆಗಳು ನಡೆದವು.

ಚುನಾವಣೆ (1937)

1937 ರ ಚುನಾವಣೆಯಲ್ಲಿ ಕಾಂಗ್ರೆಸ್ 11 ರಲ್ಲಿ 7 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿತು. 19392ನೇ ವಿಶ್ವಯುದ್ಧದಲ್ಲಿ ಬ್ರಿಟಿಷ್ ಸರ್ಕಾರ ಭಾರತೀಯ ನಾಯಕರ ಒಪ್ಪಿಗೆಯಿಲ್ಲದೆ ಭಾರತೀಯ ಸೈನಿಕರನ್ನು ಬಳಸಿಕೊಂಡಿತು. ಇದನ್ನು ವಿರೋಧಿಸಿ ಕಾಂಗ್ರೆಸ್ ಸರ್ಕಾರ ಮಂತ್ರಿಮಂಡಲವನ್ನು ತ್ಯಜಿಸಿತು.

ಲಾಹೋರ್ ಘೋಷಣೆ (1940)

1939 ರಲ್ಲಿ ವೈಸ್‌ರಾಯ್ ಲಾರ್ಡ್ ಲಿನ್ಲಿಥ್ ಗೊ ಭಾರತ ಸರ್ಕಾರಕ್ಕೆ ತಿಳಿಸದೆಯೆ ಭಾರತವು ಎರಡನೇ ಮಹಾಯುದ್ಧವನ್ನು ಸೇರುತ್ತದೆಂದು ಘೋಷಿಸಿದರು. ಇದರ ವಿರೋಧವಾಗಿ ಕಾಂಗ್ರೆಸ್ ಪಕ್ಷ ತನ್ನ ಎಲ್ಲಾ ಪ್ರತಿನಿಧಿಗಳಿಗೂ ರಾಜೀನಾಮೆ ನೀಡುವಂತೆ ಅಪ್ಪಣೆ ನೀಡಿತು. ಆಗಿನ ಮುಸ್ಲಿಮ್ ಲೀಗ್ ನ ಅಧ್ಯಕ್ಷ ಮೊಹಮದ್ ಆಲಿ ಜಿನ್ನಾ 1940 ಮಾರ್ಚ್ 23 ರಲ್ಲಿ ಲಾಹೋರ್ ನಲ್ಲಿ ನಡೆದ ಮುಸ್ಲಿಂಲೀಗಿನ ವಾರ್ಷಿಕ ಸಮ್ಮೇಳನದಲ್ಲಿ ಭಾರತವನ್ನು ಹಿಂದೂ ಮತ್ತು ಮುಸ್ಲಿಂ ದೇಶಗಳಾಗಿ ವಿಂಗಡಿಸಬೇಕೆಂಬ ಲಾಹೋರ್ ಘೋಷಣೆ ಹೊರಡಿಸಿದರು. ಈ ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಪರಿಕಲ್ಪನೆಯನ್ನು ಕೊಟ್ಟವರು ಮಹ್ಮದ್ ಇಕ್ಬಾಲ್. ಪಾಕಿಸ್ತಾನ ಎಂಬ ಹೆಸರನ್ನು ಸೂಚಿಸಿದವರು ರಹಮತ್ ಅಲಿ ಚೌಧರಿ.

ಆಗಸ್ಟ್ ಕೊಡುಗೆ (1940)

ಬ್ರಿಟನ್ 2ನೇ ಜಾಗತಿಕ ಯುದ್ಧದಲ್ಲಿ ಪೂರ್ತಿಯಾಗಿ ಮುಳುಗಿಹೋಗಿತ್ತು. ಜರ್ಮನಿ ಮತ್ತು ಇತರ ಶತೃ ರಾಷ್ಟ್ರಗಳ ವಿರುದ್ಧ ಹೋರಾಡಲು ಅಪಾರ ಸೈನ್ಯದ ನೆರವಿನ ಅಗತ್ಯವಿದ್ದ ಬ್ರಿಟನ್ ಭಾರತೀಯರನ್ನು ಈ ಯುದ್ಧದಲ್ಲಿ ಬಳಸಿಕೊಳ್ಳಲು ಯೋಜನೆ ಹಾಕಿತು. ಬ್ರಿಟಿಷ್ ಸರ್ಕಾರವು 1940 ಆಗಸ್ಟ್ 8 ರಂದು ಒಂದು ಘೋಷಣೆ ಹೊರಡಿಸಿತು. ಈ ಘೋಷಣೆಯ ಪ್ರಕಾರ ಭಾರತೀಯರು 2ನೇ ಜಾಗತಿಕ ಯುದ್ಧದಲ್ಲಿ ಬ್ರಿಟಿಷರಿಗೆ ನೆರವು ನೀಡಿದರೆ ಭಾರತಕ್ಕೆ ಡೊಮಿನಿಯನ್ ಸ್ಥಾನಮಾನವುಳ್ಳ ಸರ್ಕಾರವನ್ನು ರಚಿಸಿಕೊಡುವ ಭರವಸೆಯನ್ನು ಬ್ರಿಟನ್ ಸರ್ಕಾರ ಭಾರತೀಯರ ಮುಂದಿಟ್ಟಿತು. ಆದರೆ ಇದನ್ನು ಭಾರತೀಯರು ತಿರಸ್ಕರಿಸಿದರು.

2ನೇ ವಿಶ್ವಯುದ್ಧದಲ್ಲಿ ಭಾರತೀಯರನ್ನು ತೊಡಗಿಸಿಕೊಳ್ಳುವುದನ್ನು ವಿರೋಧಿಸಿ ಆಚಾರ್ಯ ವಿನೋಭಾ ಬಾವೆಯವರು ಪೌನಾರ್ ನಲ್ಲಿ ಸತ್ಯಾಗ್ರಹವನ್ನು ಕೈಗೊಂಡರು. ಈ ಮೂಲಕ ವೈಯಕ್ತಿಕವಾಗಿ ಸತ್ಯಾಗ್ರಹವನ್ನು ಕೈಗೊಂಡ ಮೊದಲ ವ್ಯಕ್ತಿ ಎನಿಸಿದರು.

ಗಾಂಧೀಜಿಯವರು ಬ್ರಿಟನ್ ಸರ್ಕಾರದ ಈ ನಿರ್ಧಾರವನ್ನು ಖಂಡಿಸಿ 1940 ಡಿಸೆಂಬರ್ 17 ರಂದು ದೆಹಲಿ ಚಲೋ ಚಳುವಳಿಗೆ ಕರೆ ನೀಡಿದರು.

ಕ್ರಿಪ್ಸ್ ಆಯೋಗ (1942)

ಬ್ರಿಟನ್ ಗೆ 2ನೇ ಜಾಗತಿಕ ಯುದ್ಧದ ಬಿಸಿ ಹೆಚ್ಚಾಗುತ್ತಲೇ ಹೋದಾಗ ಬ್ರಿಟನ್ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಅವರು ಸ್ಟ್ಯಾಫರ್ಡ್ ಕ್ರಿಪ್ಸ್ ಅವರ ಅಧ್ಯಕ್ಷತೆಯಲ್ಲಿ ಭಾರತಕ್ಕೆ ನಿಯೋಗವೊಂದನ್ನು ಕಳುಹಿಸಿಕೊಟ್ಟರು. ಈ ನಿಯೋಗದಲ್ಲಿ ಫೆತಿಕ್ ಲಾರೆನ್ಸ್ ಮತ್ತು ಎ.ವಿ ಅಲೆಕ್ಸಾಂಡರ್ ಸದಸ್ಯರಾಗಿದ್ದರು. 1942 ಮಾರ್ಚ್ 22 ರಂದು ಈ ಆಯೊಗವು ತನ್ನ ವರದಿಯನ್ನು ನೀಡಿತು. 2ನೇ ವಿಶ್ವಯುದ್ಧದ ನಂತರ ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡುವುದು ಮತ್ತು ಭಾರತಕ್ಕೆ ಒಂದು ಸಂವಿಧಾನ ರಚಿಸಿಕೊಡುವುದು ಈ ಆಯೋಗದ ಪ್ರಮುಖ ಉದ್ದೇಶಗಳಾಗಿದ್ದವು.

ಆದರೆ ಈ ಆಯೋಗವನ್ನು ಗಾಂಧೀಜಿ ಪೋಸ್ಟ್ ಡೇಟೆಡ್ ಚೆಕ್ (ಮುಳುಗುತ್ತಿರುವ ಬ್ಯಾಂಕಿನ ಭವಿಷ್ಯತ್ತಿನ ಚೆಕ್) ಎಂದು ಮೂದಲಿಸಿದರು.

ಈ ಸಂದರ್ಭದಲ್ಲಿ ಹಲವು ಪ್ರಾಂತ್ಯಗಳಲ್ಲಿ ಕ್ರಾಂತಿಕಾರಿಗಳಿಂದ ಪರ್ಯಾಯ ಸರ್ಕಾರಗಳು ಸ್ಥಾಪನೆಯಾದವು.

ಭಾರತ ಬಿಟ್ಟು ತೊಲಗಿ (1942)

1942 ಆಗಸ್ಟ್ ನಲ್ಲಿ ಕೂಡಲೆ ಸ್ವಾತಂತ್ರ್ಯವನ್ನು ನೀಡಬೇಕೆಂದು ಕಾಂಗ್ರೆಸ್ ಬ್ರಿಟಿಷ್ ಸರ್ಕಾರವನ್ನು ಆಗ್ರಹಿಸಿತು. ಮಾಡು ಇಲ್ಲವೇ ಮಾಡಿ ಎಂಬ ಘೋಷಣೆಯ ಮೂಲಕ ಭಾರತ ಬಿಟ್ಟು ತೊಲಗಿ ಚಳುವಳಿಗೆ (ಚಲೇಜಾವ್ ಚಳುವಳಿ) ಗಾಂಧೀಜಿ ಕರೆಕೊಟ್ಟರು. ಈ ಚಳುವಳಿಯ ಕರಡು ಪ್ರತಿಯನ್ನು ಜವಾಹರ್ ಲಾಲ್ ನೆಹರು ಅವರು ತಯಾರಿಸಿದರು. 1942 ಆಗಸ್ಟ್ 8 ರಂದು ಮುಂಬೈನ ಗೋದಳಿ ಮೈದಾನದಲ್ಲಿ ಈ ಚಳುವಳಿಯನ್ನು ಪ್ರಾರಂಭಿಸಲಾಯಿತು. ಬ್ರಿಟಿಷ್ ಸರ್ಕಾರ ಈ ಚಳುವಳಿಯ ಎಲ್ಲಾ ನಾಯಕರನ್ನು ಬಂಧಿಸಿದ ಕಾರಣ ಇದನ್ನು ನಾಯಕರಿಲ್ಲದ ಚಳುವಳಿ ಎಂತಲೂ ಕರೆಯುವರು. ಆದರೆ ಅರುಣಾ ಅಸಫ್ ಅಲಿ ಮತ್ತು ಜಯಪ್ರಕಾಶ್ ನಾರಾಯಣ್ ಅವರು ಈ ಚಳುವಳಿಯ ಮುಖಂಡತ್ವ ವಹಿಸಿಕೊಂಡು ಚಳುವಳಿನ್ನು ಮುಂದುವರೆಸಿದರು.

ಸುಭಾಷ್ ಚಂದ್ರ ಭೋಸ್ ಮತ್ತು I.N.A (1940-1945)

ಭಾರತೀಯರ ಅನುಮತಿಯಿಲ್ಲದೆಯೆ ಎರಡನೇ ಮಹಾಯುದ್ಧದಲ್ಲಿ ಭಾರತೀಯರನ್ನು ಸೇರ್ಪಡೆ ಮಾಡಿದ್ದನ್ನು ಸುಭಾಷ್ ಚಂದ್ರ ಬೋಸ್ ಬಲವಾಗಿ ಆಕ್ಷೇಪಿಸಿದರು ಆದರೆ ಇದಕ್ಕೆ ಕಾಂಗ್ರೆಸ್ ನಿಂದ ಬೆಂಬಲ ದೊರೆಯಲಿಲ್ಲ. 1939 ರಲ್ಲಿ ತ್ರಿಪುರಾ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷ ಸ್ಥಾನಕ್ಕೆ ಗಾಂಧಿಯವರ ಅಭ್ಯರ್ಥಿಯಾದ ಪಟ್ಟಾಭಿ ಸೀತಾರಾಮಯ್ಯನವರಿಗೆ ವಿರುದ್ಧವಾಗಿ ಸ್ಪರ್ಧೆಗೆ ನಿಂತು ಗೆದ್ದರು. ಈ ಸೋಲಿನಿಂದ ಅವಮಾನಗೊಂಡ ಗಾಂಧೀಜಿ, ಗೆದ್ದ ಸುಭಾಷರನ್ನು ಅಧ್ಯಕ್ಷರನ್ನಾಗಿ ಘೋಷಿಸಲೇ ಇಲ್ಲ. ಇದರಿಂದ ಬೇಸತ್ತ ಸುಭಾಷರು ಕಾಂಗ್ರೆಸ್ಸಿನಿಂದ ಹೊರಬಂದು 1939 ರಲ್ಲಿ ಫಾರ್ವರ್ಡ್ ಬ್ಲಾಕ್ ಪಕ್ಷವನ್ನು ಸ್ಥಾಪಿಸಿದರು.

ಕ್ರಾಂತಿಕಾರಿ ಎಂಬ ಕಾರಣಕ್ಕೆ ಬ್ರಿಟಿಷರು ಭೋಸರನ್ನು ಬಂಧಿಸಿದಾಗ 1941 ರಲ್ಲಿ ಭಾರತದಿಂದ ತಪ್ಪಿಸಿಕೊಂಡು ಬ್ರಿಟೀಷರ ವಿರುದ್ಧ ಹೋರಾಡಲು ಜರ್ಮನಿ ಮತ್ತು ಜಪಾನ್ ದೇಶಗಳ ಬೆಂಬಲ ಪಡೆದರು. ರೋಮ್ ಮತ್ತು ಪ್ಯಾರಿಸ್ ಗಳಲ್ಲಿ ಇಂಡಿಯನ್ ಹೋಮ್ ರೂಲ್ ಲೀಗ್ ಅನ್ನು ಸ್ಥಾಪಿಸಿದರು. 1943 ರಲ್ಲಿ ರಾಸ್ ಬಿಹಾರಿ ಬೋಸ್ ಅವರೊಂದಿಗೆ ಸೇರಿ ಜಪಾನಿನಲ್ಲಿ ಭಾರತೀಯ ರಾಷ್ಟ್ರೀಯ ಸೇನೆಯನ್ನು (I.N.A) ಸ್ಥಾಪಿಸಿದರು.

ಸೈನ್ಯದಲ್ಲಿನ ಪುರುಷರ ವಿಭಾಗದ ನಾಯಕತ್ವವನ್ನು ಕ್ಯಾಪ್ಟನ್ ಮೋಹನ್ ಸಿಂಗ್ ಮತ್ತು ಮಹಿಳಾ ವಿಭಾಗದ ನಾಯಕತ್ವವನ್ನು ಕ್ಯಾಪ್ಟನ್ ಲಕ್ಷ್ಮಿ ಸೆಹೆಗಲ್ ಅವರು ವಹಿಸಿಕೊಂಡಿದ್ದರು. 2ನೇ ವಿಶ್ವಯುದ್ಧದಲ್ಲಿ ಜಪಾನ್ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳನ್ನು ಸೆರೆಹಿಡಿದು ಅವುಗಳನ್ನು ಬೋಸ್ ಅವರಿಗೆ ಒಪ್ಪಿಸಿತು. ಆದರೆ 1945 ಆಗಸ್ಟ್ ನಲ್ಲಿ ಜಪಾನ್ ಅಮೇರಿಕಾಕ್ಕೆ ಸೋತು ಶರಣಾದಾಗ I.N.A ಸಹ ಸೋತು ಶರಣಾಯಿತು. 1945 ರ ಆಗಸ್ಟಿನಲ್ಲಿ ಬೋಸರು ವಿಮಾನ ಅಪಘಾತವೊಂದರಲ್ಲಿ ಮರಣಿಸಿದರು.

ಸಿಮ್ಲಾ ಸಮ್ಮೇಳನ (1945)

ಭಾರತದಲ್ಲಿ ಅದಾಗಲೇ ಇದ್ದ ಸಂವಿಧಾನಕ್ಕೆ ಕೆಲವು ಬದಲಾವಣೆಗಳ ಅಗತ್ಯವಿದೆಯೆಂದು ಲಾರ್ಡ್ ವೆವೆಲ್ ಕೆಲವು ಸಲಹೆಗಳನ್ನು ಭಾರತಿಯ ಪ್ರತಿನಿಧಿಗಳ ಮುಂದೆ ಇರಿಸಿದರು. 1945 ಜೂನ್ 25 ರಂದು ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನೊಳಗೊಂಡ ಒಂದು ಸಭೆಯನ್ನು ಸಿಮ್ಲಾದಲ್ಲಿ ಏರ್ಪಡಿಸಿದರು. ಆದರೆ ಇಲ್ಲಿ ಜಿನ್ನಾರವರು ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಬೇಡಿಕೆಯನ್ನಿಟ್ಟ ಕಾರಣ ಈ ಸಭೆ ಒಂದು ನಿರ್ಧಾರಕ್ಕೆ ಬರುವಲ್ಲಿ ವಿಫಲವಾಯಿತು. ಈ ಸಮ್ಮೇಳನ ವಿಫಲವಾಯಿತೆಂದು ವೆವೆಲ್ 1945 ಜೂನ್ 29 ರಂದು ಘೋಷಿಸಿದನು. ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳ ಒತ್ತಡದಿಂದ 1946 ರ ಮಧ್ಯದೊಳಗೆ ರಾಜಕೀಯ ಕಾರಣಕ್ಕೆ ಬಂಧಿತರಾದ ಎಲ್ಲರನ್ನೂ ಸರ್ಕಾರ ವಿಮೋಚನೆಗೊಳಿಸಿತು.

ಕ್ಯಾಬಿನೆಟ್ ಆಯೋಗ (1946)

ಬ್ರಿಟನ್ ನಲ್ಲಿ ಲೇಬರ್ ಪಕ್ಷ ಅಧಿಕಾರಕ್ಕೆ ಬಂದಾಗ ಬ್ರಿಟನ್ ಪ್ರಧಾನಿ ಕ್ಲೆಮೆಂಟ್ ಅಟ್ಲೆ ಭಾರತೀಯರಿಗೆ ಅಧಿಕಾರವನ್ನು ಹಸ್ತಾಂತರಿಸುವ ಸಲುವಾಗಿ ಫೆತಿಕ್ ಲಾರೆನ್ಸ್, ಸ್ಟ್ಯಾಫರ್ಡ್ ಕ್ರಿಪ್ಸ್, ಎ.ವಿ ಅಲೆಗ್ಸಾಂಡರ್ ಅವರನ್ನು ಒಳಗೊಂಡ ಕ್ಯಾಬಿನೆಟ್ ಆಯೋಗವನ್ನು 1946 ಮಾರ್ಚ್ 23 ರಂದು ಭಾರತಕ್ಕೆ ಕಳುಹಿಸಿದನು. ಕಾಂಗ್ರೆಸ್ ಮತ್ತು ಇತರ ಭಾರತೀಯ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದ ಈ ಆಯೊಗ 1946 ಮೇ 16 ರಂದು ತನ್ನ ಯೊಜನೆಗಳನ್ನು ಪ್ರಕಟಿಸಿತು.

ಭಾರತೀಯರಿಗೆ ಅಧಿಕಾರ ಹಸ್ತಾಂತರ ಆಗುವವರೆಗೆ ಮಧ್ಯಂತರ ಸರ್ಕಾರವನ್ನು ರಚಿಸುವುದು. ಈ ಸರ್ಕಾರಕ್ಕೆ ರಕ್ಷಣೆ, ವಿದೇಶಾಂಗ ಮತ್ತು ಸಾರಿಗೆ ಸಂಪರ್ಕದ ಅಧಿಕಾರಗಳನ್ನು ನೀಡುವುದು ಈ ಆಯೋಗದ ಪ್ರಮುಖ ಅಂಶಗಳಾಗಿದ್ದವು.

ಕ್ಯಾಬಿನೆಟ್ ಆಯೋಗದ ಈ ಪ್ರಸ್ತಾವನೆಗಳನ್ನು ತಿರಸ್ಕರಿಸಿ ಮುಸ್ಲಿಂ ಲೀಗ್ 1946 ಆಗಸ್ಟ್ 16 ರಂದು ನೇರ ಕಾರ್ಯಾಚರಣೆ ದಿನವನ್ನು ಆಚರಿಸಿತು.

1946 ಸೆಪ್ಟೆಂಬರ್ 2 ರಂದು ಜವಾಹರ್ ಲಾಲ್ ನೆಹರು ನೇತೃತ್ವದ ಮಧ್ಯಂತರ ಸರ್ಕಾರ ಅಸ್ಥಿತ್ವಕ್ಕೆ ಬಂದಿತು.

ಜವಾಹರ್ ಲಾಲ್ ನೆಹರು ಪ್ರಧಾನಿ, ವಿದೇಶಾಂಗ ಮತ್ತು ಕಾಮನ್ ವೆಲ್ತ್ ಒಕ್ಕೂಟದ ವ್ಯವಹಾರ

ವಲ್ಲಭಬಾಯಿ ಪಟೇಲ್ ಗೃಹಮಂತ್ರಿ

ಡಾ. ಬಾಬು ರಾಜೇಂದ್ರ ಪ್ರಸಾದ್ ಕೃಷಿ ಮತ್ತು ಆಹಾರ

ಬಲದೇವ್ ಸಿಂಗ್ ರಕ್ಷಣಾ ಖಾತೆ

ಸಿ ರಾಜಗೋಪಾಲಚಾರಿ - ಕೈಗಾರಿಕಾ ಖಾತೆ

ಅಸಫ್ ಅಲಿ - ರೈಲ್ವೆ, ಅಂಚೆ, ವಿಮಾನಯಾನ ಖಾತೆಗಳು

ಜಾನ್ ಮ್ಯಾಥ್ಯೂ ಹಣಕಾಸು ಖಾತೆ

ಶಫತ್ ಅಹ್ಮದ್ ಖಾನ್ - ಕಲೆ, ಶಿಕ್ಷಣ ಮತ್ತು ಆರೋಗ್ಯ

ಸಿ.ಎಚ್ ಭದ್ರ - ವಾಣಿಜ್ಯ

ಜಗಜೀವನ್ ರಾಮ್ ಕಾರ್ಮಿಕ ಖಾತೆ

ಸಯ್ಯದ್ ಅಲಿ ಜಹೀರ್ ಕಾನೂನು

ಶರತ್ ಬೋಸ್ - ಗಣಿಗಾರಿಕೆ

ಕ್ಲೆಮೆಂಟ್ ಅಟ್ಲೆ ಘೋಷಣೆ (1947)

1947 ಫೆಬ್ರವರಿ 20 ರಂದು ಬ್ರಿಟನ್ ಪ್ರಧಾನಿ ಕ್ಲೆಮೆಂಟ್ ಅಟ್ಲೆ ಭಾರತಕ್ಕೆ ಸ್ವಾತಂತ್ರ್ಯ ನೀಡುವುದಾಗಿ ಘೋಷಿಸಿದರು. 1947 ಮಾರ್ಚ್‍ನಲ್ಲಿ ಭಾರತೀಯರಿಗೆ ಅಧಿಕಾರ ಹಸ್ತಾಂತರಿಸಿ ಸ್ವಾತಂತ್ರ್ಯ ನೀಡುವ ಸಲುವಾಗಿ ವೈಸ್ರಾಯ್ ಆಗಿ ಲಾರ್ಡ್ ಮೌಂಟ್ ಬ್ಯಾಟನ್ ಅವರನ್ನು ಭಾರತಕ್ಕೆ ಕಳುಹಿಸಲಾಯಿತು.

ಕಾಂಗ್ರೆಸ್, ಮುಸ್ಲಿಂ ಲೀಗ್ ಮತ್ತು ಇತರ ಭಾರತೀಯ ನಾಯಕರೊಂದಿಗೆ ಚರ್ಚಿಸಿದ ಮೌಂಟ್ ಬ್ಯಾಟನ್ 1947 ಜೂನ್ 3 ರಂದು ದೇಶ ವಿಭಜನೆಯನ್ನು ಘೋಷಿಸಿದರು. ಇದನ್ನು ಮೌಂಟ್ ಬ್ಯಾಟನ್ ಪ್ಲಾನ್/ಜೂನ್ ಪ್ಲಾನ್ ಎನ್ನುವರು.

1947 ಜುಲೈ 5 ರಂದು ಬ್ರಿಟನ್ನಿನ ಹೌಸ್ ಆಫ್ ಕಾಮನ್ಸ್ ನಲ್ಲಿ ಭಾರತದ ಸ್ವಾತಂತ್ರ್ಯ ಕಾಯ್ದೆಯನ್ನು ಮಂಡಿಸಲಾಯಿತು. 1947 ಜುಲೈ 18 ರಂದು ಕಾಯ್ದೆ ಅನುಮೋದನೆಗೊಂಡು ಭಾರತ ಸ್ವಾತಂತ್ರ್ಯ ಕಾಯ್ದೆ ಜಾರಿಗೆ ಬಂದಿತು.

1947 ಆಗಸ್ಟ್ 14 ರಂದು ಪಾಕಿಸ್ತಾನ ಭಾರತದಿಂದ ಪ್ರತ್ಯೇಕಗೊಂಡಿತು. ಅಸ್ಸಾಂ ಬಂಗಾಳ ಮತ್ತು ಬಂಗಾಳಗಳ ಬಳಿ ಗಡಿರೇಖೆಯನ್ನು ಗುರ್ತಿಸಿ ಪಾಕಿಸ್ತಾನವನ್ನು ಭಾರತದಿಂದ ಬೇರ್ಪಡಿಸಲು ರ್ಯಾಡ್‍ಕ್ಲಿಫ್ ಅವರ ಅಧ್ಯಕ್ಷತೆಯಲ್ಲಿ ಗಡಿ ಆಯೊಗವನ್ನು ರಚಿಸಲಾಯಿತು. ಈ ರೇಖೆಯನ್ನು ರ್ಯಾಡ್‍ಕ್ಲಿಪ್ ರೇಖೆ ಎನ್ನುವರು.

ಸ್ವತಂತ್ರ ಭಾರತ

1947 ರ ಆಗಸ್ಟ್ 15 ರಂದು ಬ್ರಿಟಿಷರಿಂದ ಭಾರತಕ್ಕೆ ಅಧಿಕಾರ ಹಸ್ತಾಂತರವಾಯಿತು. ಮೌಂಟ್ ಬ್ಯಾಟನ್ ಸ್ವಾತಂತ್ರ್ಯ ಭಾರತದ ಮೊದಲ ಗವರ್ನರ್ ಜನರಲ್ ಆಗಿ 1948 ಜೂನ್ 21 ರ ವರೆಗೆ ಕಾರ್ಯ ನಿರ್ವಹಿಸಿದರು. ನಂತರ ಸಿ ರಾಜಗೋಪಾಲಚಾರಿಯವರು ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಆಗಿ ನೇಮಕವಾದರು.

1950 ಜನವರಿ 26 ರಂದು ಭಾರತ ತನ್ನದೇ ಸಂವಿಧಾನವನ್ನು ಅಳವಡಿಸಿಕೊಂಡು ಜಾತ್ಯಾತೀತ ಪ್ರಜಾಪ್ರಭುತ್ವವಾಯಿತು. ಭಾರತದ ಮೊದಲ ರಾಷ್ಟ್ರಪತಿಗಳಾಗಿ ಡಾ ಬಾಬು ರಾಜೇಂದ್ರ ಪ್ರಸಾದ್ ಅವರು ಆಯ್ಕೆಯಾದರು.

1953-1954 ರಲ್ಲಿ ಫ್ರೆಂಚರಿಂದ ಪಾಂಡಿಚೇರಿಯನ್ನು ಮತ್ತು 1961 ರಲ್ಲಿ ಪೋರ್ಚುಗೀಸರಿಂದ ಗೋವಾವನ್ನು ವಶಪಡಿಸಿಕೊಳ್ಳ್ಳಲಾಯಿತು.

ಕಾಮೆಂಟ್‌ಗಳು