ಪಂಚವಾರ್ಷಿಕ ಯೋಜನೆಗಳು

ಪಂಚವಾರ್ಷಿಕ ಯೋಜನೆಗಳು

ಯೋಜನಾ ಆಯೋಗ

ಅಧ್ಯಕ್ಷರು - ಜವಾಹರಲಾಲ್ ನೆಹರೂ

ಉಪಾಧ್ಯಕ್ಷರು - ಗುಲ್ಜಾರಿಲಾಲ್ ನಂದಾ

ಕಾರ್ಯದರ್ಶಿ - ವಿಷ್ಣು ಸಹಾಯ್

ಹೆಚ್ಚುವರಿ ಕಾರ್ಯದರ್ಶಿ - ತ್ರಿಲೋಕ್ ಸಿಂಗ್ 

ಸದಸ್ಯರು - ಮೊರಾರ್ಜಿ ದೇಸಾಯಿ, ವಿ.ಕೆ ಕೃಷ್ಣ ಮೆನನ್, ಸಿ.ಎಂ ತ್ರಿವೇದಿ, ಶ್ರೀರಾಮ್ ನಾರಾಯಣ, ಟಿ.ಎನ್ ಸಿಂಗ್, ಎ.ಎನ್ ಖೋಸ್ಲಾ, ಪಿ.ಸಿ ಮಹಲ್ನೋಬಿಸ್

ಪಂಚ ವಾರ್ಷಿಕ ಯೋಜನೆಗಳು

1 ಪಂಚವಾರ್ಷಿಕ ಯೋಜನೆ - 1951-56 - ಜವಾಹರ್ ಲಾಲ್ ನೆಹರು

2 ಪಂಚವಾರ್ಷಿಕ ಯೋಜನೆ- 1956-61 - ಜವಾಹರ್ ಲಾಲ್ ನೆಹರು

3 ಪಂಚವಾರ್ಷಿಕ ಯೋಜನೆ 1961-66 - ಜವಾಹರ್ ಲಾಲ್ ನೆಹರು

4 ಪಂಚವಾರ್ಷಿಕ ಯೋಜನೆ 1969-74 -ಇಂದಿರಾ ಗಾಂದಿ

5 ಪಂಚವಾರ್ಷಿಕ ಯೋಜನೆ 1974-79 - ಇಂದಿರಾ ಗಾಂದಿ

6 ಪಂಚವಾರ್ಷಿಕ ಯೋಜನೆ 1980-85 - ಇಂದಿರಾ ಗಾಂದಿ

7 ಪಂಚವಾರ್ಷಿಕ ಯೋಜನೆ 1985-89 - ರಾಜೀವ ಗಾಂದಿ

8 ಪಂಚವಾರ್ಷಿಕ ಯೋಜನೆ 1992-97 - ಪಿ.ವಿ. ನರಸಿಂಹರಾವ್

9 ಪಂಚವಾರ್ಷಿಕ ಯೋಜನೆ 1997-2002 - ಅಟಲ್ ಬಿಹಾರಿ ವಾಜಪೇಯಿ

10 ಪಂಚವಾರ್ಷಿಕ ಯೋಜನೆ 2002-07 - ಅಟಲ್ ಬಿಹಾರಿ ವಾಜಪೇಯಿ

11 ಪಂಚವಾರ್ಷಿಕ ಯೋಜನೆ - 2007-12 - ಡಾ. ಮನಮೋಹನ ಸಿಂಗ್

12 ಪಂಚವಾರ್ಷಿಕ ಯೋಜನೆ - 2012-17 - ಡಾ. ಮನಮೋಹನ ಸಿಂಗ್

ಒಂದನೇ ಪಂಚವಾರ್ಷಿಕ ಯೋಜನೆ (1951-1956)

ಮೊದಲ ಪಂಚವಾರ್ಷಿಕ ಯೋಜನೆಯು ಇಂಗ್ಲೇಂಡಿನ ಹೆರಾಡ್ ಮತ್ತು ರಷ್ಯಾದ ಡೋಮರ್ ಇವರ ಮಾದರಿಯನ್ನು ಅನುಸರಿಸಿ ಜಾರಿಗೆ ಬಂದಿತು. ಅಪೇಕ್ಷಿತ ಬೆಳವಣಿಗೆ ದರ, ವಾಸ್ತವಿಕ ಬೆಳವಣಿಗೆ ದರ ಮತ್ತು ನೈಸರ್ಗಿಕ ಬೆಳವಣಿಗೆ ದರ ಈ ಪರಿಕಲ್ಪನೆಗಳನ್ನು ಆದರಿಸಿ ಈ ಯೋಜನೆಯನ್ನು ರೂಪಿಸಲಾಯಿತು.

ನೆಹರು ಯೋಜನಾ ಆಯೋಗದ ಮೊದಲ ಅಧ್ಯಕ್ಷರಾಗಿದ್ದರು ಮತ್ತು ಗುಲ್ಜಾರಿಲಾಲ್ ನಂದಾ ಉಪಾಧ್ಯಕ್ಷರಾಗಿದ್ದರು.

ಸಮಾಜವಾದಿ ಮಾದರಿಯ ಸಮಾಜದ ನಿರ್ಮಾಣ ಮಾಡುವುದು ಮೊದಲ ಪಂಚವಾರ್ಷಿಕ ಯೋಜನೆಯ ಗುರಿಯಾಗಿತ್ತು.

1952 ರಲ್ಲಿ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ (ಕಮ್ಯುನಿಟಿ ಡೆವೆಲಪ್ಮೆಂಟ್ ಪ್ರೋಗ್ರಾಮ್ - ಸಿ.ಡಿ.ಪಿ) ಜಾರಿಗೆ ತರಲಾಯಿತು. ಈ ಕಾರ್ಯಕ್ರಮವನ್ನು ಪರಿಶೀಲಿಸಲು 1957 ರಲ್ಲಿ ಬಲವಂತರಾಯ್ ಮೆಹ್ತಾ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯ ಶಿಫಾರಸ್ಸಿನ ಮೇರೆಗೆ 1959 ಅಕ್ಟೋಬರ್ 2 ರಂದು ರಾಜಸ್ತಾನದ ನಾಗೋರ್ ನಲ್ಲಿ ಮೊದಲ ಪಂಚಾಯತ್ ವ್ಯವಸ್ಥೆಯನ್ನು ಉದ್ಘಾಟಿಸಲಾಯಿತು.

ಬಲವಂತರಾಯ್ ಮೆಹ್ತಾ ಅವರನ್ನು ಆಧುನಿಕ ಭಾರತ ಪಂಚಾಯತ್ ರಾಜ್ ವ್ಯವಸ್ಥೆಯ ಪಿತಾಮಹಾ, ಪಂಚಾಯತ್ ರಾಜ್ ಶಿಲ್ಪಿ ಎಂದು ಕರೆಯಲಾಗುತ್ತದೆ.

1951 ರಲ್ಲಿ ಪ.ಬಂಗಾಳದ ಖರಗ್ಪುರ್ ನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐ.ಐ.ಟಿ) ಅನ್ನು ಸ್ಥಾಪಿಸಲಾಯಿತು. ಇದೊಂದು ಸ್ವಾಯತ್ತ ತಾಂತ್ರಿಕ ಮತ್ತು ಸಂಶೋಧನಾ ಸಂಸ್ಥೆಯಾಗಿದೆ.

1956 ರಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸ್ಥಾಪಿಸಲಾಯಿತು.

ಭಾರತವು 1952 ರಲ್ಲಿ ಕುಟುಂಬ ಯೊಜನೆಯನ್ನು ಜಾರಿಗೆ ತರುವ ಮೂಲಕ ವಿಶ್ವದಲ್ಲಿಯೇ ಈ ಯೋಜನೆಯನ್ನು ಜಾರಿಗೆ ತಂದ ಮೊದಲ ದೇಶ ಎನಿಸಿಕೊಂಡಿತು. 1977 ರಲ್ಲಿ ಇದನ್ನು ಕುಟುಂಬ ಕಲ್ಯಾಣ ಕಾರ್ಯಕ್ರಮ ಎಂದು ಬದಲಾಯಿಸಲಾಯಿತು.

1953 ರಲ್ಲಿ ರಾಷ್ಟ್ರೀಯ ವಿಸ್ತರಣಾ ಸೇವೆ (ನ್ಯಾಷನಲ್ ಎಕ್ಟೆನ್ಷನ್ ಸರ್ವಿಸ್ - ಎನ್.ಇ.ಎಸ್) ಯೋಜನೆಯನ್ನು ಜಾರಿಗೆ ತರಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಉತ್ಪಾದನೆ ಹೆಚ್ಚು ಮಾಡಲು ವೈಜ್ಞಾನಿಕ ಹಾಗೂ ತಾಂತ್ರಿಕ ಸಹಾಯ ನೀಡುವ ಉದ್ದೇಶದಿಂದ ಇದನ್ನು ಜಾರಿಗೆ ತರಲಾಯಿತು.

1955 ಜುಲೈ 1 ರಂದು ಇಂಪೀರಿಯಲ್ ಬ್ಯಾಂಕ್ ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬದಲಾಯಿಸಲಾಯಿತು. 1956 ಜೂನ್ 2 ರಂದು ಎಸ್.ಬಿ.ಐ ಬ್ಯಾಂಕ್ ರಾಷ್ಟ್ರೀಕರಣಗೊಂಡಿತು.

ರೂ 2378 ಕೋಟಿಯ ಈ ಯೋಜನೆಯನ್ನು ಏಳು ವಿಭಾಗಗಳಿಗೆ ಹಂಚಲಾಯಿತು ಅದರಲ್ಲೂ ಪ್ರಮುಖವಾಗಿ ಕೃಷಿ ಮತ್ತು ನೀರಾವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಯಿತು.

ದಾಮೋದರ್ಭಾಕ್ರಾ ಮತ್ತು ಹಿರಾಕುಡ್ ಅಣೆಕಟ್ಟು ಯೋಜನೆಗಳು ಈ ಅವಧಿಯಲ್ಲಿ ಆರಂಭವಾದವು.

1. ನೀರಾವರಿ ಮತ್ತು ಶಕ್ತಿ (27.2%)

2. ಸಾರಿಗೆ ಮತ್ತು ಸಂಪರ್ಕ (24%)

3. ಸಮುದಾಯ ಅಭಿವೃದ್ಧಿ (17.4%)

4. ಸಾಮಾಜಿಕ ಸೇವೆಗಳು (16.64%)

5. ಉದ್ಯಮ (8.4%)

6. ಭೂಮಿ ಪುನರ್ವಸತಿ (4.1%)

7. ಇತರ ಕ್ಷೇತ್ರಗಳಲ್ಲಿ ಸೇವೆಗಳು (2.5%)

ಜಿ.ಡಿ.ಪಿ ನಿರೀಕ್ಷಿತ ಬೆಳವಣಿಗೆಯ ದರ 2.1% ಇಟ್ಟುಕೊಳ್ಳಲಾಗಿತ್ತು ಆದರೆ 3.6% ಜಿ.ಡಿ.ಪಿ ಯನ್ನು ಸಾಧಿಸಲಾಯಿತು.

ಎರಡನೆ ಪಂಚ ವಾರ್ಷಿಕ ಯೋಜನೆ (1956-1961)

ಎರಡನೇ ಯೋಜನೆಯಲ್ಲಿ ಮಹಲ್ ನೋಬಿಸ್ ಮಾದರಿಯನ್ನು ಅನುಸರಿಸಲಾಯಿತು. ಈ ಯೋಜನೆಯಲ್ಲಿ ದ್ವಿತೀಯ ವಲಯ (ಕೈಗಾರಿಕಾ ವಲಯ) ಪ್ರಾಧಾನ್ಯತೆ ಪಡೆಯಿತು. 1953 ರಲ್ಲಿ ಭಾರತೀಯ ಸಂಖ್ಯಾಶಾಸ್ತ್ರಜ್ಞ ಪ್ರಶಾಂತ್ ಚಂದ್ರ ಅವರ ಆರ್ಥಿಕ ಅಭಿವೃದ್ಧಿ ಮಾದರಿಯನ್ನು ಅಳವಡಿಸಿಕೊಳ್ಳಲಾಯಿತು.

1956 ಸೆಪ್ಟೆಂಬರ್ 1 ರಂದು ಭಾರತೀಯ ಜೀವ ವಿಮಾ ನಿಗಮವನ್ನು (ಎಲ್.ಐ.ಸಿ) ಸ್ಥಾಪಿಸಲಾಯಿತು. ಇದರ ಕೇಂದ್ರ ಕಛೇರಿ ಮುಂಬೈನಲ್ಲಿದೆ.

ವಿಶ್ವೇಶ್ವರಯ್ಯನವರ ಕೈಗಾರಿಕಿಕರಣ ಇಲ್ಲವೇ ವಿನಾಶ ಎಂಬ ತತ್ವದ ಆಧಾರದ ಅಡಿಯಲ್ಲಿ 1956 ರಲ್ಲಿ ಕೈಗಾರಿಕಾ ನೀತಿಯನ್ನು ಜಾರಿಗೆ ತರಲಾಯಿತು. ಈ ಕೈಗಾರಿಕಾ ನೀತಿಯನ್ನು ಭಾರತದ ಆರ್ಥಿಕ ಸಂವಿಧಾನ ಎನ್ನುವರು.

1957 ರಲ್ಲಿ ಅಣುಶಕ್ತಿ ಆಯೋಗ ಮತ್ತು ಟಾಟಾ ಸಂಶೋಧನಾಲಯಗಳನ್ನು ಸ್ಥಾಪಿಸಲಾಯಿತು.

1957 ರಲ್ಲಿ ಕೇಂದ್ರಿಯ ಉಗ್ರಾಣ ನಿಗಮ ಸ್ಥಾಪನೆಯಾಯಿತು. ಇದರ ಕೇಂದ್ರ ಕಛೇರಿ ನವದೆಹಲಿಯಲ್ಲಿದೆ.

1957 ರಲ್ಲಿ ನಿಕೋಲಾಸ್ ಕಾಲ್ಡಾರ್ ಅವರೆ ಸಲಹೆಯ ಮೇರೆಗೆ ಸಂಪತ್ತಿನ ತೆರಿಗೆ ಕಾಯ್ದೆ ಜಾರಿಯಾಯಿತು. ಇಂದು ಇದನ್ನು ಕಾಗದದ ತೆರಿಗೆ ಎಂದು ಕರೆಯುವರು.

2ನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಸ್ಥಾಪನೆಯಾದ ಉಕ್ಕಿನ ಸ್ಥಾವರಗಳು

ಒಡಿಶಾ - ರೂರ್ಕೆಲಾ (1955) - ಜರ್ಮನಿಯ ಸಹಯೋಗದೊಂದಿಗೆ.

ಪಶ್ಚಿಮ ಬಂಗಾಳ ದುರ್ಗಾಪುರ (1956) - ಇಂಗ್ಲೆಂಡಿನ ಸಹಯೋಗದೊಂದಿಗೆ.

ಛತ್ತೀಸ್ ಗಡ ಬಿಲಾಯ್ (1957) ರಷ್ಯಾದ ಸಹಯೋಗದೊಂದಿಗೆ.

ಪಶ್ಚಿಮ ಬಂಗಾಳ - ಚಿತ್ತರಂಜನ್ - ಲೋಕೋಮೊಟಿವ್ ಪ್ಯಾಕ್ಟರಿ

ತಮಿಳುನಾಡು - ಪೆರಂಬೂರು - ಕೋಚ್ ಪ್ಯಾಕ್ಟರಿ

1958 ರಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯನ್ನು (ಡಿ.ಆರ್.ಡಿ.ಒ) ಸ್ಥಾಪಿಸಲಾಯಿತು. ಇದರ ಕೇಂದ್ರ ಕಛೇರಿಯು ನವದೆಹಲಿಯಲ್ಲಿದೆ. ಈ ಸಂಸ್ಥೆಯು ರಕ್ಷಣಾ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತಿದ್ದು ಇದರ ಮುಖ್ಯಸ್ಥರು ಕೇಂದ್ರ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾಗಿರುತ್ತಾರೆ.

ಜಿ.ಡಿ.ಪಿ ಬೆಳವಣಿಗೆಯ ಗುರಿ 4.5% ಇಟ್ಟುಕೊಳ್ಳಲಾಗಿತ್ತು, ಆದರೆ ನಿಜವಾದ ಬೆಳವಣಿಗೆ 4.27% ಆಗಿತ್ತು.

ಮೂರನೇ ಪಂಚ ವಾರ್ಷಿಕ ಯೋಜನೆ (1961-1966)

ಮೂರನೇ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿಗೆ (ಅಕ್ಕಿ ಮತ್ತು ಗೋಧಿ ಉತ್ಪಾದನೆ) ಒತ್ತು ಕೊಡಲಾಯಿತು , ಈ ಯೋಜನೆಯನ್ನು ಗಾಡ್ಗಿಲ್ ಯೋಜನೆ ಮತ್ತು ದೂರದೃಷ್ಟಿ ಯೋಜನೆ ಎಂತಲೂ ಕರೆಯುವರು

1960 ರಲ್ಲಿ ಸಾಂದ್ರ ಕೃಷಿ ಅಭಿವೃದ್ಧಿ ಕಾರ್ಯಕ್ರಮವನ್ನು (ಇಂಟಿಗ್ರೆಟೆಡ್ ಅಗ್ರಿಕಲ್ಚರಲ್ ರೂರಲ್ ಡೆವೆಲಪ್ಮೆಂಟ್ ಪ್ರೋಗ್ರಾಮ್ ಐ.ಎ.ಡಿ.ಪಿ) ಜಾರಿಗೆ ತಂದರು.

1961 ರಲ್ಲಿ ಆದಾಯ ತೆರಿಗೆ ಕಾಯ್ದೆಯು ಜಾರಿಗೆ ಬಂದಿತು

1964 ಫೆಬ್ರವರಿ 11 ರಂದು ಕೆ ಸಂತಾನಂ ಅವರ ಭ್ರಷ್ಟಾಚಾರ ನಿರ್ಮೂಲನ ಸಮಿತಿಯ ಶಿಫಾರಸ್ಸಿನ ಮೇರೆಗೆ ಕೇಂದ್ರೀಯ ಜಾಗೃತ ದಳವನ್ನು (ಸೆಂಟ್ರಲ್ ವಿಜಿಲೆನ್ಸ್ ಸರ್ವಿಸ್ - ಸಿವಿಸಿ) ಸ್ಥಾಪಿಸಲಯಿತು

1964 ರಲ್ಲಿ ಜಾರ್ಕಂಡ್ ನ ಬೊಕಾರೋ ದಲ್ಲಿ ರಷ್ಯದ ಸಹಾಯದಿಂದ ಉಕ್ಕು ನಿಗಮವನ್ನು ಸ್ಥಾಪಿಸಲಾಯಿತು.

1964 ಜುಲೈ 1 ರಂದು ಮುಂಬೈನಲ್ಲಿ ಭಾರತೀಯ ಕೈಗಾರಿಕಾ ಅಭಿವೃದ್ದಿ ಬ್ಯಾಂಕ್ ಅನ್ನು (ಇಂಡಸ್ಟ್ರಿಯಲ್ ಡೆವೆಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ಐ.ಡಿ.ಬಿ.ಐ) ಸ್ಥಾಪಿಸಲಾಯಿತು. ಇದು ಕೈಗಾರಿಕಾ ಅಭಿವೃದಿಗೆ ಹಣಕಾಸು ನೆರವು ನೀಡುವ ಅತ್ಯುನ್ನತ ಬ್ಯಾಂಕ್ ಆಗಿದೆ.

1965 ರಲ್ಲಿ ಭಾರತ ಆಹಾರ ನಿಗಮ (ಫುಡ್ ಕಮಿಷನ್ ಆಫ್ ಇಂಡಿಯಾ ಎಫ್.ಸಿ.ಐ) ಸ್ಥಾಪನೆಯಾಯಿತು. ಇದರ ಕೇಂದ್ರ ಕಛೇರಿ ನವದೆಹಲಿಯಲ್ಲಿದೆ. ಆಹಾರ ಧಾನ್ಯಗಳನ್ನು ಕೊಳ್ಳುವುದು, ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಣೆ ಮತ್ತು ವಿತರಣೆ ಮಾಡುವುದು ಇದರ ಮುಖ್ಯ ಕಾರ್ಯವಾಗಿದೆ.

1965 ಜುಲೈ 16 ರಂದು ಗುಜರಾತ್‍ನ ಅನಂದ ಎಂಬಲ್ಲಿ ವರ್ಗೀಸ್ ಕುರಿಯನ್ ಅವರು ರಾಷ್ಟ್ರೀಯ ಹ್ಯೆನುಗಾರಿಕೆ ಅಭಿವೃದ್ಧಿ ಮಂಡಳಿಯನ್ನು (ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್ ಎನ್.ಡಿ.ಡಿ.ಬಿ) ಉದ್ಘಾಟಿಸಿದರು.

ಜಿ.ಡಿ.ಪಿ ಬೆಳವಣಿಗೆಯ ನಿರೀಕ್ಷೆ 5.6% ಇತ್ತು ಆದರೆ ನಿಜವಾದ ಬೆಳವಣಿಗೆ ದರ 2.4% ಆಗಿತ್ತು. ಕಾರಣ 1962 ರ ಚೀನಾ-ಭಾರತ ಯುದ್ಧ ಮತ್ತು 1965 ಭಾರತ ಪಾಕಿಸ್ತಾನ ಯುದ್ಧಗಳು ಹಾಗೂ 1965 ರಲ್ಲಿ ಉಂಟಾದ ಬರ ಆರ್ಥಿಕ ಅಭಿವೃದ್ಧಿ ಕುಂಠಿತವಾಗುವಂತೆ ಮಾಡಿತು.

ವಾರ್ಷಿಕ ಯೋಜನೆಗಳು (1966-69)

ಇದನ್ನು ಪಂಚವಾರ್ಷಿಕ ಯೋಜನೆಗಳ ರಜೆಯ ಕಾಲ ಎನ್ನುವರು. ಈ ಅವಧಿಯಲ್ಲಿ ಶ್ರೀಮತಿ ಇಂದಿರಾಗಾಂದಿಯವರು ಪ್ರಧಾನಿಯಾಗಿದ್ದರು.

ಮೂರನೇ ಯೋಜನೆಯ ಶೋಚನೀಯ ವೈಫಲ್ಯದಿಂದಾಗಿ ಸರ್ಕಾರ 1966-69 ಅವಧಿಯನ್ನು ಯೋಜನೆಯನ ರಜಾ ಕಾಲವೆಂದು ಘೋಷಿಸಿತು.

1966 ರಲ್ಲಿ ನಾರ್ಮನ್ ಬೋರ್ಲಾಗ್ ಅವರನ್ನು ಭಾರತಕ್ಕೆ ಕರೆಸಿ ಎಂ.ಎಸ್ ಸ್ವಾಮಿನಾಥನ್ ಅವರ ನೇತೃತ್ವದಲ್ಲಿ ಭಾರತದಲ್ಲಿ ಹಸಿರು ಕ್ರಾಂತಿಯನ್ನು ಪ್ರಾರಂಭಿಸಲಾಯಿತು. ಮಾದರಿಯಾಗಿ ಹರ್ಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶಗಳಲ್ಲಿ ಈ ಕ್ರಾಂತಿ ಪ್ರಾರಂಭಗೊಂಡಿತು.

1966 ರಲ್ಲಿ ಹಸಿರು ಕ್ರಾಂತಿಯ ಭಾಗವಾಗಿ ಅಧಿಕ ಇಳುವರಿ ವೈವಿಧ್ಯತಾ ಕಾರ್ಯಕ್ರಮವನ್ನು (ಹೈ ಯೀಲ್ಡಿಂಗ್ ವೆರೈಟೀಸ್ ಪ್ರೋಗ್ರಾಮ್ ಎಚ್.ವೈ.ವಿ.ಪಿ) ಜಾರಿಗೆ ತರಲಾಯಿತು.

1968 ಸೆಪ್ಟೆಂಬರ್ 21 ರಂದು ಬಾಹ್ಯ ಗುಪ್ತಚರ ಸಂಸ್ಥೆಯನ್ನು (ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್) ಸ್ಥಾಪಿಸಲಾಯಿತು. ಇದರ ಕೇಂದ್ರ ಕಛೇರಿ ನವದೆಹಲಿಯಲ್ಲಿದೆ.

ನಾಲ್ಕನೇ ಪಂಚ ವಾರ್ಷಿಕ ಯೋಜನೆ (1969-1974)

ಯೋಜನಾ ಆಯೋಗದ ಉಪಾಧ್ಯಕ್ಷರಲ್ಲೊಬ್ಬರಾಗಿದ್ದ ವಿ.ಆರ್ ಗಾಡ್ಗಿಲ್ ಅವರ ಆರ್ಥಿಕ ತತ್ವವನ್ನು ಅಳವಡಿಸಿಕೊಂಡಿದ್ದರಿಂದ ಈ ಯೋಜನೆಗೆ ಗಾಡ್ಗಿಲ್ ಯೋಜನೆ ಎಂದು ಹೆಸರಿಡಲಾಯಿತು.

ಸ್ಥಿರತೆಯೊಂದಿಗೆ ಬೆಳವಣಿಗೆ ಮತ್ತು ಸ್ವಪ್ರಗತಿಗೆ ಉತ್ತೇಜನ ಎಂಬ ಉದ್ದೇಶವನ್ನು ಈ ಯೋಜನೆಯಲ್ಲಿ ಗುರಿಯಾಗಿ ಇಟ್ಟುಕೊಳ್ಳಲಾಯಿತು.

ಇಂದಿರಾಗಾಂಧಿಯವರು 1969 ಜುಲೈ 19 ರಂದು 50 ಕೋಟಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ 14 ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದರು. ಕರ್ನಾಟಕದ ಕೆನರಾ ಮತ್ತು ಸಿಂಡಿಕೇಟ್ ಬ್ಯಾಂಕುಗಳು ಈ ಸಮಯದಲ್ಲಿ ರಾಷ್ಟ್ರೀಕರಣಗೊಂಡವು. ಈ ಅವಧಿಯಲ್ಲಿ ಆರ್.ಬಿ.ಐ ನ ಗವರ್ನರ್ ಆಗಿದ್ದವರು ಲಕ್ಷ್ಮೀಕಾಂತ್ ಝಾ.

3ನೇ ಪಂಚವಾರ್ಷಿಕ ಯೋಜನೆಯಲ್ಲಿ ಪ್ರಾರಂಭಿಸಲಾಗಿದ್ದ ಹಸಿರು ಕ್ರಾಂತಿಯನ್ನು ಈ ಅವಧಿಯಲ್ಲೂ ಪ್ರಾರಂಭಿಸಿ ಕೃಷಿ ಕ್ಷೇತ್ರ ಅಭಿವೃದ್ಧಿಯಾಗುವಲ್ಲಿ ಶ್ರಮ ವಹಿಸಲಾಯಿತು. ಆದ್ದರಿಂದ ಈ ಅವಧಿಯನ್ನು ಹಸಿರು ಕ್ರಾಂತಿಯ ಫಲಪ್ರದ ಅವಧಿ ಎನ್ನುವರು.

1969 ರಲ್ಲಿ ನಾರಿಮನ್ ಮತ್ತು ಗಾಡ್ಗಿಲ್ ಸಮಿತಿಯ ಶಿಫಾರಸ್ಸಿನ ಮೇರೆಗೆ ಎಸ್.ಬಿ.ಐ ಬ್ಯಾಂಕ್ ಜಿಲ್ಲಾವಾರು ಅಭಿವೃದ್ಧಿಗಾಗಿ ಅಗ್ರಬ್ಯಾಂಕ್ (ಲೀಡ್ ಬ್ಯಾಂಕ್) ಯೋಜನೆಯನ್ನು ರೂಪಿಸಿತು

1969 ಆಗಸ್ಟ್ 15 ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು (ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಜೇಷನ್ - ಐ.ಎಸ್.ಆರ್.ಒ) ಸ್ಥಾಪಿಸಲಾಯಿತು.

ಜಿ.ಡಿ.ಪಿ ಬೆಳವಣಿಗೆಯ ನಿರೀಕ್ಷಿತ ದರ 5.6% ಎಂದು ಊಹಿಸಲಾಗಿತ್ತು. ಆದರೆ ನಿಜವಾದ ಬೆಳವಣಿಗೆ ದರ 3.3% ಆಗಿತ್ತು. ಕಾರಣ 1971 ರಲ್ಲಿ ನಡೆದ ಭಾರತ ಪಾಕಿಸ್ತಾನ ಯುದ್ಧ ಮತ್ತು ಬರಗಾಲದಿಂದ ಆದ ಬೆಳೆ ನಷ್ಟ.

1970-71 ರಲ್ಲಿ ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯು ಕೃಷಿ ಗಣತಿಯನ್ನು ಆರಂಭಿಸಿತು. ಅದರ ಭಾಗವಾಗಿ ಭಾರತದಲ್ಲೂ ಸಹ ಕೇಂದ್ರ ಕೃಷಿ ಸಚಿವಾಲಯ ಕೃಷಿ ಗಣತಿಯನ್ನು ಆರಂಭಿಸಿತು.

1972 ರಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿತು

1973 ರಲ್ಲಿ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಇಂದಿರಾಗಾಂದಿಯವರು ಪ್ರಾಜೆಕ್ಟ್ ಟೈಗರ್ ಯೋಜನೆಯನ್ನು ಉದ್ಘಾಟಿಸಿದರು.

1973 ರಲ್ಲಿ ಬರಗಾಲ ಪೀಡಿತ ಪ್ರದೇಶಾಭಿವೃದ್ಧಿ ಕಾರ್ಯಕ್ರಮವನ್ನು (ಡ್ರಾಟ್ ಪ್ರೋನ್ ಏರಿಯಾಸ್ ಪ್ರೊಗ್ರಾಮ್ - ಡಿ.ಪಿ.ಎ.ಪಿ) ಪ್ರಾರಂಭಿಸಲಾಯಿತು.

ಐದನೇ ಪಂಚ ವಾರ್ಷಿಕ ಯೋಜನೆ (1974-1979)

ಈ ಯೋಜನೆಯ ಕರಡು ಪ್ರತಿಯನ್ನು ತಯಾರಿಸಿದವರು ಡಿ.ಪಿ ಧಾರ್

ಐದನೇ ಪಂಚವಾರ್ಷಿಕ ಯೋಜನೆಯಲ್ಲಿ ಉದ್ಯೋಗ ಸೃಷ್ಟಿ ಮತ್ತು ಗರೀಬಿ ಹಟಾವೊ (ಬಡತನ ನಿವಾರಣೆ ) ಪ್ರಮುಖ ಅಂಶಗಳಾಗಿದ್ದವು.

1974 ರಲ್ಲಿ ವಿಶ್ವಬ್ಯಾಂಕ್ ನ ಸಹಾಯದಿಂದ ಕನಿಷ್ಟ ಅಗತ್ಯತೆಯ ಕಾರ್ಯಕ್ರಮವನ್ನು (ಬೇಸಿಕ್ ನೀಡ್ ಸ್ಟ್ರಾಟೆಜಿ) ಜಾರಿಗೆ ತರಲಾಯಿತು.

ಭಾರತ ಸರ್ಕಾರ 1974 ರಲ್ಲಿ ರಾಜಸ್ತಾನದ ಪ್ರೋಕ್ರಾನ್ ನಲ್ಲಿ ನಗುತ್ತಿರುವ ಬುದ್ಧ (ಲಾಫಿಂಗ್ ಬುದ್ಧ) ಎಂಬ ಹೆಸರಿನಡಿಯಲ್ಲಿ ಪ್ರಥಮ ಅಣು ಪರೀಕ್ಷೆ ನಡೆಸಿತು.

1975 ರಲ್ಲಿ ಸಮುದಾಯ ಜಲಾನಯನ ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತರಲಾಯಿತು. ಮಳೆಕೊಯ್ಲು, ಕೆರೆ ಬಾವಿಗಳನ್ನು ಸರಿಪಡಿಸಿಕೊಂಡು ನೀರನ್ನು ಸದುಪಯೋಗ ಪಡಿಸಿಕೊಳ್ಳುವ ಯೊಜನೆ ಇದಾಗಿತ್ತು.

1975 ಅಕ್ಟೋಬರ್ 2 ರಂದು 20 ಅಂಶಗಳ ಯೋಜನೆಯನ್ನು ಜಾರಿಗೆ ತರಲಾಯಿತು. ಮತ್ತು ಗ್ರಾಮಿಣ ಪ್ರದೇಶಗಳ ಅಭಿವೃದ್ಧಿಗೆ ನರಸಿಂಹನ್ ಮತ್ತು ಆರ್.ಜಿ ಸರಯ್ಯ ಅವರ ಸಮಿತಿಯ ಶಿಫಾರಸ್ಸಿನ ಮೇರೆಗೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಸ್ಥಾಪಿಸಲಾಯಿತು. ನರಸಿಂಹನ್ ಅವರನ್ನು ಭಾರತದ ಗ್ರಾಮೀಣ ಬ್ಯಾಂಕ್ ಪಿತಾಮಹಾ ಎಂದು ಕರೆಯಲಾಗುತ್ತದೆ.

ಉತ್ತರ ಪ್ರದೇಶದ ಮೊರಾಂಗಾಬಾದ್ ನಲ್ಲಿ ಸಿಂಡಿಕೇಟ್ ಬ್ಯಾಂಕ್ ಆವರ ಪ್ರಾಯೋಜಕತ್ವದಲ್ಲಿ ಪ್ರಥಮ್ ಎಂಬ ಮೊದಲ ಗ್ರಾಮೀಣ ಬ್ಯಾಂಕ್ ಸ್ಥಾಪನೆಯಾಯಿತು. 1976 ರಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಕಾಯ್ದೆಯನ್ನು ರೂಪಿಸಲಾಯಿತು.

1974 ಡಿಸೆಂಬರ್ 9 ರಂದು ಆರ್.ಬಿ.ಐ ಬ್ಯಾಂಕ್ ಏಷ್ಯಾ ಕ್ಲಿಯರಿಂಗ್ ನ ಯೂನಿಯನ್ ಸದಸ್ಯತ್ವ ಪಡೆಯಿತು.

ಇಸ್ರೊ ಸಂಸ್ಥೆಯು 1975 ಏಪ್ರಿಲ್ 19 ರಂದು ಭಾರತದ ಮೊದಲ ಕೃತಕ ಉಪಗ್ರಹ ಆರ್ಯಭಟವನ್ನು ರಷ್ಯಾದ ಕಾಸ್ಮೋಸ್ 3 ಎಂಬ ರಾಕೆಟ್ ಮೂಲಕ ಉಡಾಯಿಸಿತು.

1975 ರಲ್ಲಿ ವಿದ್ಯುಚ್ಛಕ್ತಿಯನ್ನು ಸಮವರ್ತಿ ಪಟ್ಟಿಗೆ ಸೇರಿಸಲಾಯಿತು.

1975-77 ರ ವರೆಗೆ ಇಂದಿರಾಗಾಂಧಿ ಆಂತರಿಕ ತುರ್ತುಪರಿಸ್ಥಿತಿಯನ್ನು ಘೋಷಿಸಿದರು.

1976 ರಲ್ಲಿ ಸಂವಿಧಾನದ 23 ನೇ ವಿಧಿಯನ್ವಯ ಜೀತ ಪದ್ಧತಿ ನಿರ್ಮೂಲನಾ ಕಾಯ್ದೆಯನ್ನು ಜಾರಿಯಾಯಿತು

1976 ರಲ್ಲಿ ಸಂವಿಧಾನದ 42 ನೇ ತಿದ್ಧಪಡಿಯ ಪ್ರಕಾರ ಶಿಕ್ಷಣ, ತೂಕ, ಅಳತೆ, ಆರೋಗ್ಯ ಮತ್ತು ನ್ಯಾಯಾಂಗ (ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಗಳನ್ನು ಹೊರತು ಪಡಿಸಿ) ಇವುಗಳನ್ನು ಸಮವರ್ತಿ ಪಟ್ಟಿಗೆ ಸೇರಿಸಲಾಯಿತು.

1976 ರಲ್ಲಿ 43 ನೇ ವಿಧಿಯಡಿಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಕಾಯ್ದೆಯನ್ನು ಜಾರಿಗೆ ತರಲಾಯಿತು.

1977 ರಲ್ಲಿ ಕೂಲಿಗಾಗಿ ಕಾಳು ಕಾರ್ಯಕ್ರಮ ಜಾರಿಯಾಯಿತು. 2004 ರಲ್ಲಿ ಇದನ್ನು ರಾಷ್ಟ್ರೀಯ ಕೂಲಿಗಾಗಿ ಕಾಳು ಕಾರ್ಯಕ್ರಮ ಎಂದು ಮರುನಾಮಕರಣ ಮಾಡಲಾಯಿತು.

1977 ರಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರ ಅಧಿಕಾರಕ್ಕೆ ಬಂದ ಕಾರಣ ಈ ಯೋಜನೆಯು ಒಂದು ವರ್ಷ ಮುಂಚಿತವಾಗಿಯೇ ಮುಕ್ತಾಯಗೊಂಡು ಆವರ್ತ ಯೋಜನೆ ಜಾರಿಗೆ ಬಂದಿತು.

ಜಿ.ಡಿ.ಪಿ ನಿರೀಕ್ಷಿತ ಬೆಳವಣಿಗೆ 4.4% ಎಂದು ನಿರೀಕ್ಷಿಸಲಾಗಿತ್ತು. ಮತ್ತು ನಿಜವಾದ ಜಿ.ಡಿ.ಪಿ ಬೆಳವಣಿಗೆ 5.0% ಆಗಿತ್ತು.

ಪರಿವರ್ತನ/ಉರುಳುವ ಯೋಜನೆ (1978-1980)

ಸ್ವೀಡನ್ ದೇಶದ ಅರ್ಥಶಾಸ್ತ್ರಜ್ಞ ಗುನ್ನಾರ್ ಮಿರ್ಡಾಲ್ ಉರುಳುವ ಯೋಜನೆಯ ಪರಿಕಲ್ಪನೆಯನ್ನು ಪರಿಚಯಿಸಿದರು.

1978 ರಲ್ಲಿ ಅಧಿಕಾರಕ್ಕೆ ಬಂದ ಜನತಾ ಪಕ್ಷದ ಸರ್ಕಾರವು ಐದನೇ ಪಂಚವಾರ್ಷಿಕ ಯೋಜನೆಯನ್ನು ತಿರಸ್ಕರಿಸಿ ಪರಿವರ್ತನ ಯೋಜನೆಯನ್ನು ಜಾರಿಗೆ ತಂದಿತು.  ಆದ್ದರಿಂದ ಈ ಅವಧಿಯನ್ನು ಯೋಜನ ರಜೆಯ 2ನೇ ಹಂತ ಎನ್ನುವರು.

ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ  ಡಿ.ಟಿ ಲಕಡ್ ವಾಲರು ಮೊದಲ ಬಾರಿಗೆ ಬಡತನ ರೇಖೆ ಪರಿಕಲ್ಪನೆಯನ್ನು ನೀಡಿದರು. ಆದ್ದರಿಂದ ಇವರನ್ನು ಭಾರತದ ಬಡತನ ರೇಖೆಯ ಪಿತಾಮಹಾ ಎನ್ನುವರು.

1978 ರಲ್ಲಿ ವಯಸ್ಕ ಶಿಕ್ಷಣ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು.

1979 ರಲ್ಲಿ ಯುವಕರಿಗೆ ಸ್ವಯಂ ಉದ್ಯೋಗ ಮಾಡಿಕೊಳ್ಳಲು ಗ್ರಾಮೀಣ ಯುವಕರಿಗೆ ಸ್ವಯಂ ಉದ್ಯೊಗ ತರಬೇತಿ ಕಾರ್ಯಕ್ರಮವನ್ನು (ಟ್ರೈನಿಂಗ್ ಫರ್ ರೂರಲ್ ಯೂತ್ ಸೆಲ್ಫ್ ಎಂಪ್ಲಾಯ್ ಮೆಂಟ್ ಮಿಷನ್) ಜಾರಿಗೆ ತಂದರು.

1978 ಜನವರಿ 16 ರಂದು 1000, 5000 ಮತ್ತು 10000 ರೂ ನೊಟುಗಳನ್ನು ಪ್ರಧಾನ ಮಂತ್ರಿ ಮೊರಾರ್ಜಿ ದೇಸಾಯಿ ರದ್ಧುಮಾಡಿದರು.

1980 ರಲ್ಲಿ ಸಮಗ್ರ ಗ್ರಾಮೀಣ ಅಭಿವೃದ್ಧಿ ಯೊಜನೆಯನ್ನು (ಇಂಟಿಗ್ರೆಟೆಡ್ ರೂರಲ್ ಡೆವಲಪ್ಮೆಂಟ್ ಸ್ಕೀಮ್) ಜಾರಿ ಮಾಡಲಾಯಿತು. ನಂತರ ಈ ಯೋಜನೆಯನ್ನು ಸ್ವರ್ಣಜಯಂತಿ ಗ್ರಾಮ ಸ್ವರೋಜ್ ಗಾರ್ ಯೋಜನೆಯಲ್ಲಿ ವಿಲೀನ ಮಾಡಲಾಯಿತು. 2011 ರಲ್ಲಿ ಸ್ವರ್ಣಜಯಂತಿ ಗ್ರಾಮ ಸ್ವರೋಜ್ ಗಾರ್ ಯೋಜನೆಯನ್ನು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಎಂದು ಮರುನಾಮಕರಣ ಮಾಡಲಾಯಿತು.

ಆರನೆ ಪಂಚ ವಾರ್ಷಿಕ ಯೋಜನೆ (1980-1985)

ನೆಹರು ಅವರು ಪ್ರತಿಪಾದಿಸಿದ್ದ ಸಮಾಜವಾದದ ಆರ್ಥಿಕ ನೀತಿ ಕೊನೆಗೊಂಡು ಆರ್ಥಿಕ ಉದಾರೀಕರಣ ಪ್ರಾರಂಭವಾಯಿತು.

ಕೈಗಾರಿಕಾ ಅಭಿವೃದ್ಧಿಗೆ ಅದರಲ್ಲೂ ಮಾಹಿತಿ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಲಾಯಿತು

1980 ರಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮವನ್ನು (ನ್ಯಾಷನಲ್ ರೂರಲ್ ಎಂಪ್ಲಾಯ್ಮೆಂಟ್ ಪ್ರೋಗ್ರಾಮ್) ಜಾರಿ ಮಾಡಲಾಯಿತು.

1980 ಏಪ್ರಿಲ್ 15 ರಂದು 200 ಕೋಟಿಗಿಂತಲು ಹೆಚ್ಚಿನ ವ್ಯವಹಾರ ಹೊಂದಿದ್ದ 6 ಬ್ಯಾಂಕುಗಳ ರಾಷ್ಟ್ರೀಕರಣ ಮಾಡಲಾಯಿತು. ಕರ್ನಾಟಕದ ಕಾರ್ಪೋರೇಷನ್ ಮತ್ತು ವಿಜಯಾ ಬ್ಯಾಂಕುಗಳು ರಾಷ್ಟ್ರೀಕರಣಗೊಂಡವು. ಈ ಅವಧಿಯಲ್ಲಿ ಆರ್.ಬಿ.ಐ ನ ಗವರ್ನರ್ ಆಗಿದ್ದವರು ಐ.ಜಿ ಪಾಟೀಲ್

1982 ಜನವರಿ 1 ರಂದು ವಿದೇಶಿ ವ್ಯಾಪಾರದ ಉತ್ತೇಜನಕ್ಕೆ ಎಕ್ಸಿಮ್ (ಎಕ್ಸ್ಪೋರ್ಟ್ ಅಂಡ್ ಇಂಪೋರ್ಟ್) ಬ್ಯಾಂಕನ್ನು ಸ್ಥಾಪಿಸಲಾಯಿತು. ಇದರ ಕೇಂದ್ರ ಕಛೇರಿ ಮುಂಬೈನಲ್ಲಿದೆ.

ಶಿವರಾಮನ್ ಸಮಿತಿಯ ಶಿಫಾರಸ್ಸಿನ ಮೇರೆಗೆ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಹಣಕಾಸು ಸೌಲಭ್ಯ ನಿಡುವ ಅತ್ಯುನ್ನತ ಬ್ಯಾಂಕ್ ಆದ ನಬಾರ್ಡ್ ಬ್ಯಾಂಕನ್ನು (ನ್ಯಾಷನಲ್ ಬ್ಯಾಂಕ್ ಫರ್ ಅಗ್ರಿಕಲ್ಚರಲ್ ಅಂಡ್ ರೂರಲ್ ಡೆವಲಪ್ಮೆಂಟ್) 1982 ಜುಲೈ 12 ರಂದು ಸ್ಥಾಪಿಸಲಾಯಿತು. ಇದರ ಕೇಂದ್ರ ಕಛೇರಿ ಮುಂಬೈನಲ್ಲಿದೆ.

ಜಿ.ಡಿ.ಪಿ ಬೆಳವಣಿಗೆಯ ಗುರಿ 5.2% ಇತ್ತು. ನೈಜ ಬೆಳವಣಿಗೆ 5.4% ಆಗಿತ್ತು.

ಏಳನೇ ಪಂಚ ವಾರ್ಷಿಕ ಯೋಜನೆ (1985-1990)

ಈ ಯೋಜನೆಯಲ್ಲಿ ಶಕ್ತಿ ಉತ್ಪಾದನೆ, ತಂತ್ರಜ್ಞಾನದ ಉನ್ನತೀಕರಣ ಮತ್ತು ಕೈಗಾರಿಕೆಗಳ ಉತ್ಪಾದನಾ ಮಟ್ಟದ ಸುಧಾರಣೆಗೆ ಪ್ರಾಮುಖ್ಯತೆ ನೀಡಲಾಯಿತು. ಆರ್ಥಿಕ ಉತ್ಪಾದಕತೆಯನ್ನು ಹೆಚ್ಚುಮಾಡುವುದು, ಆಹಾರ ಧಾನ್ಯಗಳ ಹೆಚ್ಚುವರಿ ಉತ್ಪಾದನೆ, ಉದ್ಯೋಗಾವಕಾಶ ಬೆಳವಣಿಗೆಗೆ ಮಹತ್ವ, ಕೃಷಿಯಲ್ಲಿ ಸುಸ್ಥಿರ ಬೆಳವಣಿಗೆ ಮತ್ತು ಅಭಿವೃದ್ಧಿ, ಬಡತನ ನಿರ್ಮೂಲನಾ ಕಾರ್ಯಕ್ರಮ, ಸಣ್ಣ ರೈತರು ಮತ್ತು ದೊಡ್ಡ ಪ್ರಮಾಣದ ರೈತರು ಉತ್ಪಾದಕತೆಯನ್ನು ಹೆಚ್ಚಿಸುವುದು ಮುಂತಾದವು ಈ ಯೋಜನೆಯ ಪ್ರಮುಖ ಅಂಶಗಳಾಗಿದ್ದವು.

1985 ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ (ಮಿನಿಸ್ಟರಿ ಆಫ್ ಹ್ಯೂಮನ್ ರಿಸೋರ್ಸಸ್ ಡೆವಲಪ್ಮೆಂಟ್) ಸ್ಥಾಫನೆಯಾಯಿತು. ಇಂದು ಇದನ್ನು ಕೇಂದ್ರ ಶಿಕ್ಷಣ ಸಚಿವಾಲಯ ಎನ್ನುವರು.

1989 ರಲ್ಲಿ ಇಂದಿರಾ ಆವಾಸ್ ಯೋಜನೆಯನ್ನು ಜಾರಿಗೆ ತರಲಾಯಿತು. ಇಂದು ಇದನ್ನು ಪ್ರಧಾನ್ ಮಂತ್ರಿ ಆವಾಸ್ ಯೋಜನಾ ಎನ್ನುವರು. ಇದರ ಮುಖ್ಯ ಉದ್ದೇಶ ಗ್ರಾಮೀಣ ಭಾಗದಲ್ಲಿ ವಸತಿಯಿಲ್ಲದ ವ್ಯಕ್ತಿಗಳಿಗೆ ವಸತಿ ನಿರ್ಮಿಸಿಕೊಡುವುದಾಗಿದೆ.

1986 ಡಿಸೆಂಬರ್ 24 ರಂದು ಗ್ರಾಹಕ ರಕ್ಷಣಾ ಕಾನೂನನ್ನು ಜಾರಿಗೆ ತಂದರು. ಆ ಕಾರಣದಿಂದ ಡಿಸೆಂಬರ್ 24 ರಂದು ಗ್ರಾಹಕ ರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತದೆ.

1986 ರಲ್ಲಿ ಸಂವಿಧಾನದ 24 ನೇ ವಿಧಿಯ ಅನ್ವಯ 14 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಸ್ಥಳಗಳಲ್ಲಿ ಕೆಲಸಕ್ಕೆ ತೊಡಗಿಸಿಕೊಳ್ಳುವುದು ಕಾನೂನು ಬಾಹಿರ ಎಂದು ಸಾರಿ ಬಾಲಕಾರ್ಮಿಕ ನಿಷೇಧ ಕಾನೂನನ್ನು ಜಾರಿಗೆ ತರಲಾಯಿತು.

1988 ರಲ್ಲಿ ಸ್ವರ್ಣ ಹಸ್ತಲಾಘವ ಪದ್ಧತಿಯನ್ನು ಜಾರಿಗೆ ತರಲಾಯಿತು. ಇದು ಸ್ವಯಂ ನಿವೃತ್ತಿ ಘೋಷಿಸಿಕೊಳ್ಳುವ ಸಾರ್ವಜನಿಕ ನೌಕರರಿಗೆ ಸಂಬಂಧಿಸಿದೆ.

1988 ಏಪ್ರಿಲ್ 12 ರಂದು ಬಂಡವಾಳ ಮಾರುಕಟ್ಟೆಯನ್ನು ನಿಯಂತ್ರಿಸಲು ಸೆಕ್ಯೂರಿಟೀಸ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಸಂಸ್ಥೆಯನ್ನು ಸ್ಥಾಪಿಸಲಾಯಿತು. 1992 ರಲ್ಲಿ ಇದು ಶಾಸನಬದ್ಧ ಸಂಸ್ಥೆಯಾಯಿತು. ಇದರ ಕೇಂದ್ರ ಕಛೇರಿ ಮುಂಬೈನಲ್ಲಿದೆ.

1988 ರಲ್ಲಿ ಕೇಂದ್ರ ಸರ್ಕಾರವು ಅರಣ್ಯದ ಅಭಿವೃದ್ಧಿ, ರಕ್ಷಣೆ ಮತ್ತು ಸುಸ್ಥಿರತೆಗಾಗಿ ರಾಷ್ಟ್ರೀಯ ನೂತನ ಅರಣ್ಯ ನೀತಿಯನ್ನು ಜಾರಿಗೆ ತಂದಿತು

ಜಿ.ಡಿ.ಪಿ ಬೆಳವಣಿಗೆಯ ನಿರೀಕ್ಷಿತ ದರ 5.0% ಇಟ್ಟುಕೊಳ್ಳಲಾಗಿತ್ತು. ಆದರೆ ನಿಜವಾದ ಬೆಳವಣಿಗೆ ದರ 5.7% ಆಗಿತ್ತು

ಹೊಸ ಆರ್ಥಿಕ ನೀತಿ (1990-92)

1991 ಜುಲೈ 24 ರಂದು  ಭಾರತದಲ್ಲಿ ಹೊಸ ಆರ್ಥಿಕ ನೀತಿಯನ್ನು ಘೋಷಣೆ ಮಾಡಿ ಉದಾರಿಕರಣ, ಖಾಸಗಿಕರಣ ಮತ್ತು ಜಾಗತಿಕರಣಗಳನ್ನು ಜಾರಿಗೆ ತರಲಾಯಿತು. ಹೊಸ ಆರ್ಥಿಕ ನೀತಿಯ ಜಾರಿಗೆ ಕಾರಣರಾದವರು ಅಂದಿನ ಅರ್ಥಸಚಿವರಾಗಿದ್ದ ಶ್ರೀ ಮನಮೋಹನ್ ಸಿಂಗ್

ದೇಶದಲ್ಲಿ ಆಮದಿನ ಪ್ರಮಾಣ ತಗ್ಗಿಸಿ ರಫ್ತಿನ ಪ್ರಮಾಣ ಹೆಚ್ಚಿಸುವ ಉದೇಶದಿಂಧ ಈ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲಾಯಿತು.

1990-92 ರ ಈ ಅವಧಿಯನ್ನು ಯೋಜನಾ ಅವಧಿಯ 3ನೇ ರಜೆಯ ಹಂತ ಎನ್ನುವರು

ಭಾರತವು ನಿರ್ವಹಿತ ವಿನಿಮಯ ದರ ವ್ಯವಸ್ಥೆಯನ್ನು ಹೊಂದಿದೆ. 1992 ಮಾರ್ಚ್ 1 ರಂದು ಸರ್ಕಾರವು ಉದಾರೀಕೃತ ವಿನಿಮಯ ದರ ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೆ ತಂದಿತು.

ಎಂಟನೇ ಪಂಚವಾರ್ಷಿಕ ಯೋಜನೆ (1992-1997)

1 ಜನವರಿ 1995 ರಲ್ಲಿ ವಿಶ್ವ ವ್ಯಾಪಾರ ಸಂಸ್ಥೆ ಸದಸ್ಯತ್ವ ಪಡೆಯಿತು. ಅಂದಿನ ಪ್ರಧಾನಿಯಾಗಿದ್ದ ಪಿ.ವಿ ನರಸಿಂಹರಾವ್ ಅವರ ಸಚಿವ ಸಂಪುಟದಲ್ಲಿ ಅರ್ಥಸಚಿವರಾಗಿದ್ದ ಮನಮೋಹನ್ ಸಿಂಗ್ ಅವರು ಭಾರತದಲ್ಲಿ ಉದಾರಿಕರಣ, ಖಾಸಗಿಕರಣ ಮತ್ತು ಜಾಗತಿಕರಣ ನೀತಿಗಳನ್ನು ಜಾರಿಗೆ ತಂದರು. ಇದರ ಪರಿಣಾಮ ಭಾರತದಲ್ಲಿ ಮುಕ್ತ ಮಾರುಕಟ್ಟೆ ವ್ಯವಸ್ಥೆ ಪ್ರಾರಂಭವಾಯಿತು. ಈ ಯೋಜನೆಯನ್ನು ರಾವ್ ಮತ್ತು ಮನಮೋಹನ್ ಯೊಜನೆ ಎನ್ನುವರು.

1992 ರಲ್ಲಿ 73 ಮತ್ತು74 ನೇ ಸಂವಿಧಾನದ ತಿದ್ದುಪಡಿಗಳ ಅನ್ವಯ ಗ್ರಾಮೀಣ ಮತ್ತು ಪಟ್ಟಣ ಪಂಚಾಯಿತಿಗಳಿಗೆ ಸಾಂವಿಧಾನಿಕ ಸ್ಥಾನಮಾನ ನೀಡಲಾಯಿತು.

1993 ಮೇ 10 ರಂದು ಕರ್ನಾಟಕದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.

1995 ರಲ್ಲಿ ಮೊದಲ ಬಾರಿಗೆ ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್ (HDI) ಅನ್ನು ಭಾರತದಲ್ಲಿ ಸಿದ್ಧಪಡಿಸಲಾಯಿತು.

1996 ರಲ್ಲಿ ಮಹಾತ್ಮಗಾಂಧಿಯ ಮುಖ ಚಿತ್ರವಿರುವ ನೊಟುಗಳ ಚಲಾವಣೆ ಪ್ರಾರಂಭವಾಯಿತು

1997 ಫೆಬ್ರವರಿ 20 ರಂದು ನವದೆಹಲಿಯಲ್ಲಿ ಟ್ರಾಯ್ ಎಂಬ ದೂರ ಸಂಪರ್ಕ ವಲಯದ ನಿಯಂತ್ರಕ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1992 ರಲ್ಲಿ ಕೇಂದ್ರ ಸರ್ಕಾರವು ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾಗಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲು ಪ್ರಾರಂಭಿಸಿತು. ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಈ ಪ್ರಶಸ್ತಿ ಪಡೆದ ಮೊದಲಿಗರು.

ಜಿ.ಡಿ.ಪಿ ಬೆಳವಣಿಗೆಯ ಗುರಿ 5.6% ಹಾಕಿಕೊಳ್ಳಲಾಗಿತ್ತು. ಆದರೆ 6.78% ಗುರಿಯನ್ನು ಸಾಧಿಸಲಾಯಿತು.

ಒಂಬತ್ತನೇ ಪಂಚ ವಾರ್ಷಿಕ ಯೋಜನೆ (1997-2002)

ಒಂಬತ್ತನೇ ಪಂಚವಾರ್ಷಿಕ ಯೋಜನೆಯು ಪ್ರಗತಿಯೊಂದಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರಾರಂಭವಾಯಿತು.

ಈ ಯೋಜನೆ ಅಡಿಯಲ್ಲಿ ಸಾಮಾಜಿಕ ಮೂಲಸೌಕರ್ಯ, ಕೃಷಿ, ಮಾಹಿತಿ ತಂತ್ರಜ್ಞಾನ ಮತ್ತು ಜಲನೀತಿಯ ವಿಷಯಗಳನ್ನುಒಳಪಡಿಸಲಾಯಿತು.

1997 ರಲ್ಲಿ ಸ್ವರ್ಣಜಯಂತಿ ಶಹರೀ ರೋಜ್ ಗಾರ್ ಯೋಜನೆಯನ್ನು ಆರಂಭಿಸಲಾಯಿತು. ಇಂದು ಇದನ್ನು ದೀನ್ ದಯಾಳ್ ಅಂತ್ಯೋದಯ ರಾಷ್ಟ್ರಿಯ ನಗರ ಜೀವನೋಪಾಯ ಅಭಿಯಾನ ಎಂದು ಮರುನಾಮಕರಣ ಮಾಡಲಾಗಿದೆ.

1999 ರಲ್ಲಿ ಸ್ವರ್ಣಜಯಂತಿ ಗ್ರಾಮ್ ಸ್ವರೊಜ್‍ಗಾರ್ ಯೋಜನೆಯನ್ನು ಆರಂಭಿಸಿದರು. ಇಂದು ಇದನ್ನು ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಜೀವನೋಪಾಯ ಅಭಿಯಾನ ಎಂದು ಮರುನಾಮಕರಣ ಮಾಡಲಾಗಿದೆ.

2000 ಡಿಸೆಂಬರ್ 25 ರಂದು ಪ್ರಧಾನಮಂತ್ರಿ ಗ್ರಾಮ ಸಡಕ್ ಯೊಜನೆಯನ್ನು ಜಾರಿಗೆ ತರಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಸರ್ವಋತು ರಸ್ತೆಗಳನ್ನು ನಿರ್ಮಾಣ ಮಾಡುವುದು ಮತ್ತು ಕಚ್ಚಾ ರಸ್ತೆಗಳನ್ನು ಪಕ್ಕಾ ರಸ್ತೆಗಳನ್ನಾಗಿ ಮಾಡುವುದು ಈ ಯೋಜನೆಯ ಉದ್ದೇಶವಾಗಿತ್ತು.

ಕಡುಬಡವರಿಗೆ ಕನಿಷ್ಠ ಪೌಷ್ಟಿಕ ಆಹಾರ ಪೂರೈಕೆ ಮಾಡುವ ಉದ್ದೇಶದಿಂದ 2000 ಡಿಸೆಂಬರ್ 25 ರಂದು ಅಂತ್ಯೋದಯ ಅನ್ನ ಯೊಜನೆಯನ್ನು ಜಾರಿಗೆ ತರಲಾಯಿತು.

ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸುವ ಉದ್ದೇಶದಿಂದ 2001 ರಲ್ಲಿ ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮ ಅಸ್ಥಿತ್ವಕ್ಕೆ ಬಂದಿತು.

ನಗರ ಪ್ರದೇಶದಲ್ಲಿನ ಬಡವರಿಗೆ ವಸತಿ ನಿರ್ಮಾಣ ಮಾಡಿಕೊಡುವ ಉದ್ದೇಶದಲ್ಲಿ 2001 ರಲ್ಲಿ ವಾಲ್ಮೀಕಿ ಅಂಬೇಡ್ಕರ್ ಆವಾಸ್ ಯೊಜನೆಯನ್ನು ಜಾರಿಗೆ ತಂದರು

1998 ಮೇ 11 ರಂದು ರಾಜಸ್ತಾನದ ಪ್ರೋಖ್ರಾನ್ ನಲ್ಲಿ 2ನೇ ಅಣುಶಕ್ತಿ ಪರೀಕ್ಷೆಯನ್ನು ನಡೆಸಲಾಯಿತು. ಇದನ್ನು ಆಪರೇಷನ್ ಶಕ್ತಿ ಎನ್ನುವರು. ಆದ್ದರಿಂದ ಮೇ 11 ರಂದು ರಾಷ್ಟ್ರಿಯ ತಂತ್ರಜ್ಞಾನ ದಿನ ಎಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ವಾಜಪೇಯಿ ಅವರು ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಎಂಬ ಧ್ಯೇಯ ವಾಕ್ಯ ನೀಡಿದರು

1999 ಫೆಬ್ರವರಿ 19 ರಂದು ಭಾರತ ಪಾಕಿಸ್ಥಾನದ ನಡುವೆ ಉತ್ತಮ ಸ್ನೇಹ ಸಂಬಂಧ ಕಾಯ್ದುಕೊಳ್ಳಲು ಸದಾ ಇ ಸರ್‍ಹದ್ ಎಂಬ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಯಿತು. ಈ ಸಂದರ್ಭದಲ್ಲಿ ಪ್ರಧಾನಿ ವಾಜಪೇಯಿ ಮತ್ತು ಪಾಕ್ ಪ್ರಧಾನಿ ನವಾಜ್ ಷರೀಫ್ ಮಧ್ಯೆ ದ್ವಿಪಕ್ಷೀಯ ಒಪ್ಪಂದ ನಡೆಯಿತು. ಇದನ್ನು ಲಾಹೋರ್ ನಿರ್ಣಯ ಎನ್ನುವರು

1999 ರಲ್ಲಿ ಭಾರತ ಪಾಕಿಸ್ತಾನ ಮಧ್ಯೆ ಕಾರ್ಗಿಲ್ ಕದನ ನಡೆಯಿತು. ಆಪರೇಷನ್ ವಿಜಯದ ಮೂಲಕ ಬಾರತ ಯುದ್ಧ ಗೆದ್ದಿತು. ಜುಲೈ 26 ಅನ್ನು ಕಾರ್ಗಿಲ್ ವಿಜಯ ದಿವಸ್ ಎಂದು ಆಚರಿಸುವರು.

1999 ರಲ್ಲಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯನ್ನು (ಫಾರಿನ್ ಎಕ್ಸ್ಚೇಂಜ್ ಮ್ಯಾನೇಜ್ಮೆಂಟ್ ಆ್ಯಕ್ಟ್) ಜಾರಿಗೆ ತರಲಾಯಿತು.

2001 ರಲ್ಲಿ ಸುವರ್ಣ ಚತುಷ್ಕೋನ ರಸ್ತೆ ಯೋಜನೆಯನ್ನು (ಗೋಲ್ಡನ್ ಕ್ಯಾಡ್ರಿಲ್ಯಾಟಿರಲ್) ಪ್ರಾರಂಭಿಸಲಾಯಿತು. ಈ ರಸ್ತೆಯು ಶ್ರೀನಗರದಿಂದ ಕನ್ಯಾಕುಮಾರಿಯವರೆಗೆ ಮತ್ತು ಗುಜಾರತಿನ ಪೋರಬಂದರಿನಿಂದ ಅಸ್ಸಾಮ್ ನ ಸಿಲ್ವಾರವರೆಗೆ ಸಂಪರ್ಕಗೊಂಡಿದೆ. ದೇಶದ ಪ್ರಮುಖ ನಗರಗಳಾದ ದೆಹಲಿ, ಮುುಂಬೈ, ಚೆನ್ನೈ ಮತ್ತು ಕೋಲ್ಕತ್ತಾ ನಗರಗಳನ್ನು ಈ ರಸ್ತೆಯು ಸಂಪರ್ಕಿಸುತ್ತದೆ.

ಜಿ.ಡಿ.ಪಿ ಬೆಳವಣಿಗೆಯ ಗುರಿ 7.1% ಇತ್ತು. ಆದರೆ 6.8% ಬೆಳವಣಿಗೆ ಸಾಧಿಸಲಾಯಿತು.

ಹತ್ತನೇ ಪಂಚ ವಾರ್ಷಿಕ ಯೋಜನೆ (2002-2007)

20 ಅಂಶಗಳ ಕಾರ್ಯಕ್ರಮದ ಅನುಷ್ಟಾನ

ತಲಾದಾಯವನ್ನು 2 ಪಟ್ಟು ಹೆಚ್ಚು ಮಾಡುವುದು, ದೇಶದ ಸಮಗ್ರ ಆರ್ಥಿಕಾಭಿವೃದ್ಧಿ ಮತ್ತು ಮಾನವ ಜೀವನ ಗುಣಮಟ್ಟವನ್ನು ಹೆಚ್ಚಿಸುವುದು ಈ ಯೋಜನೆಯ ಪ್ರಮುಖ ಉದ್ದೇಶಗಳಾಗಿದ್ದವು.

2002 ರಲ್ಲಿ ಸಂವಿಧಾನದ 86ನೇ ತಿದ್ದುಪಡಿ ಮಾಡಿ 21 (ಎ) ವಿಧಿಯಡಿಯಲ್ಲಿ 614 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕೆಂದು ಮತ್ತು 51-ಎ (ಕೆ) ವಿಧಿಯಡಿಯಲ್ಲಿ 614 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಪೋಷಕರ ಮೂಲಭೂತ ಕರ್ತವ್ಯವೆಂದು ಕಾನೂನು ರೂಪಿಸಿತು.

2003 ರಿಂದ ಪ್ರತಿವರ್ಷ ಜನವರಿ 9 ಅನ್ನು ಪ್ರವಾಸಿ ಭಾರತಿಯ ದಿವಸ್ ಎಂದು ಆಚರಿಸಲಾಗುತ್ತದೆ.

2005 ಸೆಪ್ಟಂಬರ್ 25 ರಂದು ರಾಷ್ಟ್ರಿಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ನ್ಯಾಷನಲ್ ರೂರಲ್ ಎಂಪ್ಲಾಯ್ಮೆಂಟ್ ಗ್ಯಾರಂಟೀ ಆ್ಯಕ್ಟ್) ಜಾರಿಗೆ ತರಲಾಯಿತು. 2006 ಫೆಬ್ರವರಿ 2 ರಂದು ಆಂದ್ರಪ್ರದೇಶದ ಅನಂತಪುರಂನಲ್ಲಿ ಈ ಯೋಜನೆಗೆ ಚಾಲನೆ ದೊರೆಯಿತು. 2009 ರಲ್ಲಿ ಇದನ್ನು ಮಹಾತ್ಮಾ ಗಾಂಧಿ ರಾಷ್ಟ್ರಿಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಎಂದು ಮರುನಾಮಕರಣ ಮಾಡಲಾಯಿತು.

2005 ಅಕ್ಟೋಬರ್ 12 ರಂದು ಮಾಹಿತಿ ಹಕ್ಕು ಕಾಯ್ದೆ ಜಾರಿಯಾಯಿತು. ಆದ್ದರಿಂದ ಅಕ್ಟೋಬರ್ 12 ಅನ್ನು ಮಾಹಿತಿ ಹಕ್ಕು ದಿನ ಎಂದು ಆಚರಿಸುವರು.

2005 ಜುಲೈ 18 ರಂದು ಅಮೇರಿಕಾ ಮತ್ತು ಭಾರತ ಮಧ್ಯೆ ನಾಗರಿಕ ಪರಮಾಣು ಒಪ್ಪಂದವಾಯಿತು.

2005 ರಲ್ಲಿ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು (ನ್ಯಾಷನಲ್ ಕರಿಕ್ಯುಲಮ್ ಫ್ರೇಮ್) ರೂಪಿಸಲಾಯಿತು.

8.1% ಜಿ.ಡಿ.ಪಿ ಬೆಳವಣಿಗೆಯ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ ಸಾಧಿಸಿದ ಬೆಳವಣಿಗೆ 7.7%

ಹನ್ನೊಂದನೆ ಪಂಚ ವಾರ್ಷಿಕ ಯೋಜನೆ (2007-2012)

ತ್ವರಿತ ಮತ್ತು ಸಮನ್ವಯ ಪ್ರಗತಿ ಸಾಧಿಸುವುದು ಈ ಯೊಜನೆಯ ಪ್ರಮುಖ ಉದ್ಧೇಶವಾಗಿತ್ತು. ಈ ಯೊಜನೆಯ ಮುಖ್ಯ ರೂವಾರಿ ಸಿ.ರಂಗರಾಜನ್.

ವರಮಾನ ಮತ್ತು ಬಡತನ, ಶಿಕ್ಷಣ, ಆರೋಗ್ಯ, ಸ್ತ್ರೀ ಮತ್ತು ಮಕ್ಕಳು, ಮೂಲಭೂತ ಸೌಕರ್ಯಗಳು, ಪರಿಸರ ಸಂರಕ್ಷಣೆ ಈ ಯೋಜನೆಯಲ್ಲಿ ಕೈಗೆತ್ತಿಕೊಂಡ ಪ್ರಮುಖ ವಿಷಯಗಳಾಗಿದ್ದವು.

2007 ರಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನವನ್ನು (ನ್ಯಾಷನಲ್ ಫುಡ್ ಸೆಕ್ಯುರಿಟಿ ಮಿಷನ್) ಆರಂಭಿಸಲಾಯಿತು. ಭತ್ತ, ಗೋದಿ, ದ್ವಿದಳ ಧಾನ್ಯ ಎಣ್ಣೆ ಕಾಳುಗಳು ಮತ್ತು ವಾಣಿಜ್ಯ ಬೆಳೆಗಳ ಉತ್ಪಾದನೆಗೆ ಪ್ರಾಮುಖ್ಯತೆ ನೀಡಲಾಯಿತು.

2009 ರಲ್ಲಿ ಶಿಕ್ಷಣ ಹಕ್ಕು ಕಾಯ್ದೆಯನ್ನು (ರೈಟ್ ಟು ಎಜುಕೇಷನ್) ಜಾರಿಗೆ ತರಲಾಯಿತು.

2014 ರಲ್ಲಿ ಲೋಕಪಾಲ್ ಅನ್ನು ಸಂಸತ್ತಿನಲ್ಲಿ ಅಂಗೀಕರಿಸಿ ಜಾರಿ ಮಾಡಲಾಯಿತು.

ಈ ಯೊಜನೆಯನ್ನು ಮನಮೋಹನ್ ಸಿಂಗ್ ಅವರು ಭಾರತೀಯ ಶಿಕ್ಷಣ ಯೋಜನೆ ಎಂದು ಕರೆದಿದ್ದಾರೆ

ಹನ್ನೆರಡನೆಯ ಪಂಚವಾರ್ಷಿಕ ಯೋಜನೆ (2012-2017)

ಪಂಚವಾರ್ಷಿಕ ಯೋಜನೆಗಳಲ್ಲಿ ಕೊನೆಯದಾದ ಈ ಯೋಜನೆಯನ್ನು ಆರೋಗ್ಯ ಯೋಜನೆ ಎಂತಲೂ ಕರೆಯುವರು.

ದೇಶವನ್ನು ತ್ವರಿತ, ಸಮರ್ಥನೀಯ, ಸುಸ್ಥಿರ, ಸಮನ್ವಯ ಪ್ರಗತಿಯೆಡೆಗೆ ಕೊಂಡೊಯ್ಯುವುದೇ ಈ ಯೊಜನೆಯ ಪ್ರಮುಖ ಉದ್ದೇಶವಾಗಿತ್ತು.

ಎನ್.ಡಿ.ಎ ಸರ್ಕಾರವು ಅಧಿಕಾರಕ್ಕೆ ಬಂದ ಪರಿಣಾಮ ಯೋಜನಾ ಆಯೋಗದ ಸ್ಥಾನದಲ್ಲಿ ನೀತಿ ಆಯೋಗ ಸ್ಥಾಪನೆಯಾಯಿತು. ಆದ್ದರಿಂದ ಈ ಯೊಜನೆಯು ಅರ್ಧಕ್ಕೆ ನಿಂತು ಹೋಯಿತು

ಕಾಮೆಂಟ್‌ಗಳು