ಭಾಗ 3 - ಮೂಲಭೂತ ಹಕ್ಕುಗಳು

ಭಾಗ 3 - ಮೂಲಭೂತ ಹಕ್ಕುಗಳು

ಸಂವಿಧಾನದ 12 ನೇ ವಿಧಿಯಿಂದ 35 ನೇ ವಿಧಿಯವರೆಗೆ ಮೂಲಭೂತ ಹಕ್ಕುಗಳ ಬಗ್ಗೆ ಚರ್ಚಿಸಲಾಗಿದೆ. ಮೂಲಭೂತ ಹಕ್ಕುಗಳನ್ನು ಅಮೇರಿಕಾದಿಂದ ಎರವಲು ಪಡೆಯಲಾಗಿದೆ.

ಮೂಲಭೂತ ಹಕ್ಕುಗಳನ್ನು ಭಾರತದ ಮ್ಯಾಗ್ನಾಕಾರ್ಟ್ ಎಂದು ಕರೆಯುವರು. ಮ್ಯಾಗ್ನಾಕಾರ್ಟ ಎಂಬುದು  ಪ್ರಪಂಚದಲ್ಲಿ ಮೊದಲ ಬಾರಿಗೆ 1215 ರಲ್ಲಿ ಇಂಗ್ಲೇಂಡಿನ ಅರಸ ಹೆನ್ರಿ ತನ್ನ ಪ್ರಜೆಗಳಿಗೆ ನೀಡಿದ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಕಾನೂನು ಆಗಿದೆ.

ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ವ್ಯಕ್ತಿ ನೇರವಾಗಿ 32 ನೇ ವಿಧಿಯಡಿಯಲ್ಲಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬಹುದು. ಆದರೆ ಇತರೇ ಹಕ್ಕುಗಳ ಉಲ್ಲಂಘನೆಯಾದಾಗ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ಬರುವುದಿಲ್ಲ. ಆಗ 226 ನೇ ವಿಧಿಯಡಿಯಲ್ಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬೇಕು.

ಮೂಲಭೂತ ಹಕ್ಕುಗಳಿಗೆ ನ್ಯಾಯಾಂಗದ ರಕ್ಷಣೆಯಿದ್ದು ಅವುಗಳ ಉಲ್ಲಂಘನೆ ಮಾಡಿದವರಿಗೆ ಸರ್ವೋಚ್ಚ ನ್ಯಾಯಾಲಯವು ಶಿಕ್ಷೆ ನೀಡುತ್ತದೆ. ಆದ್ದರಿಂದ ಸುಪ್ರೀಂಕೋರ್ಟ್ ಅನ್ನು ಮೂಲಭೂತ ಹಕ್ಕುಗಳ ರಕ್ಷಕನೆಂದು ಕರೆಯಲಾಗುತ್ತದೆ. 226 ನೇ ವಿಧಿಯಡಿಯಲ್ಲಿ ಹೈಕೋರ್ಟ್ ಸಹ ಮೂಲಭೂತ ಹಕ್ಕುಗಳನ್ನು ರಕ್ಷಿಸುತ್ತದೆ.

ಮೂಲಭೂತ ಹಕ್ಕುಗಳನ್ನು ಅನುಭವಿಸಲು ಎಷ್ಟೇ ಸ್ವಾತಂತ್ರ್ಯವಿದ್ದರೂ ಸಹ ಅವುಗಳನ್ನು ಅನುಭವಿಸಲು ಸಹ ಕೆಲವು ನಿರ್ಬಂಧಗಳಿವೆ ಆದ್ದರಿಂದ ಮೂಲಭೂತ ಹಕ್ಕುಗಳು ನಿರ್ಬಂಧಿತ ಹಕ್ಕುಗಳಾಗಿವೆ.

ಮೂಲಭೂತ ಹಕ್ಕುಗಳನ್ನು ಸಂವಿಧಾನದ 3ನೇ ಭಾಗದಲ್ಲಿ ಪ್ರಸ್ತಾಪಿಸಲಾಗಿದ್ದು ಇವುಗಳು ನೈಸರ್ಗಿಕ ಹಕ್ಕುಗಳಿಗಿಂತ ಭಿನ್ನವಾದವುಗಳಾಗಿವೆ. ಮೂಲ ಆಶಯಕ್ಕೆ ಧಕ್ಕೆ ಬಾರದ ಹಾಗೆ ಕಾಲಕಾಲಕ್ಕೆ ಇವುಗಳನ್ನು ತಿದ್ದುಪಡಿ ಮಾಡಿಕೊಳ್ಳಬಹುದು

1. ಸಮಾನತೆಯ ಹಕ್ಕು (14-18)

14 - ಕಾನೂನಿನ ಮುಂದೆ ಭಾರತೀಯರು ಮತ್ತು ವಿದೇಶಿಯರು ಎಲ್ಲರು ಸಮಾನರು. ಕಾನೂನಿಗಿಂತ ಯಾರೂ ಅಧಿಕವಲ್ಲ. (ಕಾನೂನಿಗಿಂತ ಯಾರೂ ಅಧಿಕವಲ್ಲ ಎಂಬ ಪರಿಕಲ್ಪನೆ ನೀಡಿದವರು ಇಂಗ್ಲೆಂಡಿನ ಎ.ವಿ ಡೈಸಿ).

ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಈ ವಿಧಿಯಲ್ಲಿ ವಿನಾಯಿತಿ ಇದೆ. 361 ನೇ ವಿಧಿಯನ್ವಯ ರಾಷ್ಟ್ರಪತಿ ಮತ್ತು ರಾಜ್ಯಪಾಲರು ಅಧಿಕಾರಾವಧಿಯಲ್ಲಿರುವಾಗ ಅವರ ವಿರುದ್ಧ  ಯಾರೂ ಕ್ರಿಮಿನಲ್ ಆಪಾಧನೆಗಳನ್ನು ಆಪಾದಿಸುವಂತಿಲ್ಲ.

ವಿದೇಶಿ ರಾಯಭಾರಿಗಳು ಮತ್ತು ಅತ್ಯುನ್ನತ ಪದಾಧಿಕಾರಿಗಳಿಗೆ ಸಹ ಭಾರತದ ಕಾನೂನು ಅನ್ವಯವಾಗುವುದಿಲ್ಲ.

15 - ಜಾತಿ. ಲಿಂಗ. ಭಾಷೆ. ಹುಟ್ಟಿದ ಸ್ಥಳದ ಆಧಾರದ ಮೆಲೆ ತಾರತಮ್ಯ ಮಾಡುವುದು ನಿಷೇಧ

16(1) ಸಾರ್ವಜನಿಕ ಹುದ್ದೆಗಳಲ್ಲಿ ಸಮಾನ ಅವಕಾಶ

16(2) - ಜಾತಿ. ಲಿಂಗ. ಭಾಷೆ. ಹುಟ್ಟಿದ ಸ್ಥಳದ ಆಧಾರದ ಮೆಲೆ ಉದ್ಯೋಗ ನೀಡುವಲ್ಲಿ ತಾರತಮ್ಯ ಮಾಡುವಂತಿಲ್ಲ. ಆದರೆ ಕಡೆಗಣಿಸಲ್ಪಟ್ಟ ವ್ಯಕ್ತಿ/ಸಮುದಾಯಕ್ಕೆ ಸರ್ಕಾರಗಳು ಮೀಸಲಾತಿ ನೀಡಬಹುದು

16(3) - ಸರ್ಕಾರಗಳು ಬಯಸಿದರೆ ಸೂಕ್ತ ಕಾರಣ ನೀಡಿ ವಾಸಸ್ಥಳ ಆಧಾರದ ಮೇಲೆ ಉದ್ಯೋಗದಲ್ಲಿ ಮೀಸಲಾತಿ ನೀಡಬಹುದು.

16(4) ಯಾವುದೇ ಹಿಂದುಳಿದ ವರ್ಗಕ್ಕೆ ರಾಜ್ಯ ಸರ್ಕಾರವು ಸೂಕ್ತ ಕಾರಣ ನೀಡಿ ಮೀಸಲಾತಿ ನೀಡಬಹುದು.

16 (4ಎ) ಬಡ್ತಿ ನೀಡುವಲ್ಲಿ ಸಹ ಸರ್ಕಾರವು ಮೀಸಲಾತಿ ಅಳವಡಿಸಿಕೊಳ್ಳಬಹುದು.

17 - ಅಸ್ಪೃಶ್ಯತೆ ನಿಷೇಧ (1955 ರ ಅಸ್ಪೃಶ್ಯತಾ ನಿವಾರಣಾ ಕಾಯ್ದೆಯನ್ನು 1976 ರಲ್ಲಿ ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆ ಎಂದು ಬದಲಾಯಿಸಲಾಯಿತು). ಯಾವುದೇ ಸಾರ್ವಜನಿಕ ಸ್ಥಳಗಳಿಗೆ ಮತ್ತು ಧಾರ್ಮಿಕ ಸ್ಥಳಗಳಿಗೆ ಪ್ರವೇಶ ನೀಡದಂತೆ ನಿರ್ಬಂಧಿಸುವುದು ಶಿಕ್ಷಾರ್ಹ ಅಪರಾಧ.

18 - ಬಿರುದುಗಳ ರದ್ಧತಿ

ಮಿಲಿಟರಿ ಮತ್ತು ಸರ್ಕಾರಿ (ಶೈಕ್ಷಣಿಕ) ಬಿರುದುಗಳನ್ನು ನೀಡಬಹುದು ಭಾರತೀಯ ಪ್ರಜೆಯು ವಿದೇಶಿಯರಿಂದ ಬಿರುದುಗಳನ್ನು ಸ್ವೀಕರಿಸುವಂತಿಲ್ಲ

ರಾಜ್ಯದ ಯಾವುದೇ ಲಾಭದಾಯಕ ಹುದ್ದೆ ಅಥವಾ ಅಧಿಕಾರದಲ್ಲಿರುವ ವಿದೇಶಿ ಪ್ರಜೆಯೊಬ್ಬ ರಾಷ್ಟ್ರಪತಿಗಳ ಅನುಮತಿಯಿಲ್ಲದೆ ವಿದೇಶದಿಂದ ಯಾವುದೇ ಬಿರುದನ್ನು ಸ್ವೀಕರಿಸುವಂತಿಲ್ಲ

ರಾಜ್ಯದ ಯಾವುದೇ ಲಾಭದಾಯಕ ಹುದ್ದೆ ಅಥವಾ ಅಧಿಕಾರದಲ್ಲಿರುವ ಭಾರತೀಯ ಅಥವಾ ವಿದೇಶಿ ಪ್ರಜೆಯೊಬ್ಬ ರಾಷ್ಟ್ರಪತಿಗಳ ಅನುಮತಿಯಿಲ್ಲದೆ ವಿದೇಶದಿಂದ ಯಾವುದೇ ಕಾಣಿಕೆ ಅಥವಾ ಹುದ್ದೆಯನ್ನು ಸ್ವೀಕರಿಸುವಂತಿಲ್ಲ

2. ಸ್ವಾತಂತ್ರ್ಯದ ಹಕ್ಕು (19-22)

19 ನೇ ವಿಧಿಯು ಆರು ಉಪವಿಧಿಗಳನ್ನು ಹೊಂದಿದೆ (ಈ ಹಕ್ಕುಗಳು ಭಾರತೀಯರಿಗೆ ಮಾತ್ರ ಅನ್ವಯಿಸುತ್ತವೆ)

ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ. (ಪತ್ರಿಕಾ ಸ್ವಾತಂತ್ರ್ಯ, ಇಂಟರ್ನೆಟ್ ಬಳಕೆ ಮತ್ತು ಮಾಹಿತಿ ಪಡೆಯುವ ಸ್ವಾತಂತ್ರ್ಯ ಸಹ ಇದರಲ್ಲಿ ಸೇರುತ್ತದೆ). ವಾಕ್ ಸ್ವಾತಂತ್ರ್ಯದ ದುರುಪಯೋಗ ಮಾಡಿಕೊಂಡು ನ್ಯಾಯಾಂಗ ನಿಂದನೆ, ಸಾರ್ವಜನಿಕ ಶಾಂತಿಗೆ ಹಾನಿ, ಮಾನ ಹಾನಿ, ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವ ಹಾಗಿಲ್ಲ ಅದು ಅಪರಾಧವಾಗುತ್ತದೆ.

ಅಸ್ತ್ರಗಳಿಲ್ಲದೆ ಶಾಂತಿಯುತವಾಗಿ ಒಂದೆಡೆ ಸೇರುವ ಸ್ವಾತಂತ್ರ್ಯ.

ಸಂಘ ಮತ್ತು ಸಂಸ್ಥೆಗಳನ್ನು ಸ್ಥಾಪಿಸುವ ಸ್ವಾತಂತ್ರ್ಯ

ಭಾರತದಾದ್ಯಂತ ಚಲಿಸುವ ಸ್ವಾತಂತ್ರ್ಯ

ಭಾರತದ ಯಾವುದೇ ಭಾಗದಲ್ಲಿ ವಾಸಿಸುವ ಮತ್ತು ಖಾಯಂ ನೆಲೆಸುವ ಸ್ವಾತಂತ್ರ್ಯ

ಯಾವುದೇ ವೃತ್ತಿಯನ್ನು ನಡೆಸುವ ಅಥವಾ ಯಾವುದೇ ವ್ಯಾಪಾರದಲ್ಲಿ ತೊಡಗುವ ಹಕ್ಕು

20ಅಪರಾಧಿಗೆ ಅಗತ್ಯಕ್ಕಿಂತ ಹೆಚ್ಚಿನ ಶಿಕ್ಷೆ ನೀಡುವುದರ ವಿರುದ್ಧ ರಕ್ಷಣೆ

20(1) - ಒಬ್ಬ ವ್ಯಕ್ತಿ ಒಂದು ಅಪರಾಧ ಮಾಡಿದಾಗ ಆ ತಪ್ಪಿಗೆ ಆಗ ಏನು ಶಿಕ್ಷೆ ವಿಧಿಸಬೇಕೆಂಬ ನಿಯಮವಿರುತ್ತದೋ ಅದನ್ನು ಮಾತ್ರ ವಿಧಿಸಬೇಕು. ಬದಲಾಗಿ ಆ ತಪ್ಪಿಗೆ ಈ ಹಿಂದೆ ನೀಡಲಾಗುತ್ತಿದ್ದ ಶಿಕ್ಷೆಯನ್ನು ನೀಡಬಾರದು.

20(2) - ಒಬ್ಬ ಅಪರಾಧಿಗೆ ಒಂದು ತಪ್ಪಿಗೆ ಒಂದಕ್ಕಿಂತ ಹೆಚ್ಚು ಬಾರಿ ಶಿಕ್ಷೆ ನಿಡುವಂತಿಲ್ಲ

20(3) ಒಬ್ಬ ಅಪರಾಧಿಗೆ ತನ್ನ ವಿರುದ್ದ ತಾನೆ ಸಾಕ್ಷಿ ಹೇಳುವಂತೆ ಒತ್ತಾಯಿಸುವಂತಿಲ್ಲ

21ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ

21 (ಎ) 2002 ರಲ್ಲಿ 86 ನೇ ತಿದ್ದುಪಡಿಯ ಮೂಲಕ ಈ ಕಾಯ್ದೆಯನ್ನು ಜಾರಿ ಮಾಡಲಾಯಿತು. 6 - 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ದೊರೆಯಬೇಕು. ಈ ವಿಧಿಯಡಿಯಲ್ಲಿ 2009 ರಲ್ಲಿ R.T.E ಕಾಯ್ದೆ ಜಾರಿಗೆ ಬಂದಿತು.

22ಅಕ್ರಮವಾಗಿ ಒಬ್ಬ ವ್ಯಕ್ತಿಯನ್ನು ಬಂಧಿಸುವುದನ್ನು ಈ ಹಕ್ಕು ತಡೆಯುತ್ತದೆ. ನ್ಯಾಯಾಲಯದಲ್ಲಿ ವಿಚಾರಣೆಯಾಗುವುದಕ್ಕೂ ಮುನ್ನ ಒಬ್ಬ ವ್ಯಕ್ತಿಯನ್ನು ಬಂಧಿಸಿದರೆ ಅದನ್ನು ಪ್ರಿವೆಂಟಿವ್ ಡಿಟೆನ್ಷನ್ (ಮುನ್ನೆಚ್ಚರಿಕೆ ಬಂಧನ) ಎನ್ನುವರು. ನ್ಯಾಯಾಲಯದಲ್ಲಿ ವಿಚಾರಣೆಯಾದ ನಂತರ ಒಬ್ಬ ವ್ಯಕ್ತಿಯನ್ನು ಬಂಧಸಿದರೆ ಅದನ್ನು ಪ್ಯುನಿಟಿವ್ ಡಿಟೆನ್ಷನ್ ಎನ್ನುವರು.

ಕಾರಣವಿಲ್ಲದೇ ಯಾವುದೇ ವ್ಯಕ್ತಿಯನ್ನು ಬಂಧಿಸುವಂತಿಲ್ಲ. ಬಂಧಿತನನ್ನು 24 ಗಂಟೆಯ ಒಳಗೆ (ಪ್ರಯಾಣದ ವೇಳೆಯನ್ನು ಹೊರತುಪಡಿಸಿ) ಹತ್ತಿರದ ನ್ಯಾಯಾಲಯದಲ್ಲಿ ಹಾಜರುಪಡಿಸಬೇಕು. ಇದನ್ನೇ ಹೇಬಿಯಸ್ ಕಾರ್ಪಸ್ (ಬಂಧೀ ಪ್ರತ್ಯಕ್ಷೀಕರಣ) ಎನ್ನುವರು.

ಬಂಧಿತ ತನ್ನ ಪರವಾಗಿ ವಕೀಲರನ್ನು ನೇಮಿಸಿಕೊಳ್ಳಬಹುದು.

ನ್ಯಾಯಾಲಯವು ಬಂಧನದ ಅವಧಿಯನ್ನು ವಿಸ್ತರಣೆ ಮಾಡದಿದ್ದಲ್ಲಿ 24 ಗಂಟೆಗಳ ನಂತರ ವ್ಯಕ್ತಿ ಬಿಡುಗಡೆಯಾಗಬಹುದು. ಆದರೆ ಶತ್ರುದೇಶದ ಪ್ರಜೆಗಳಿಗೆ ಮತ್ತು ಪ್ರಿವೆಂಟಿವ್ ಡಿಟೆನ್ಷನ್ (ಮುನ್ನೆಚ್ಚರಿಕೆ ಬಂಧನ) ಅಡಿಯಲ್ಲಿ ಬಂಧನಕ್ಕೊಳಗಾದವರಿಗೆ ಈ ಕಾನೂನು ಅನ್ವಯವಾಗುವುದಿಲ್ಲ.

ಬಂಧನವಾದ ವ್ಯಕ್ತಿಯು 3 ತಿಂಗಳಿಗಿಂತಲೂ ಹೆಚ್ಚುಕಾಲ ಬಂಧನದಲ್ಲಿರುವಂತಿಲ್ಲ. ಹಾಗೆ ನಿರ್ಧರಿಸುವ ಅಧಿಕಾರ ಉಚ್ಛ ನ್ಯಾಯಾಲಯದ ನ್ಯಾಯಾಧೀಶರನ್ನು ಒಳಗೊಂಡ ಸಲಹಾ ಮಂಡಳಿಗೆ ಮಾತ್ರ ಇರುತ್ತದೆ. ಸಲಹಾ ಮಂಡಳಿ ಯಾವುದೇ ಪ್ರಕರಣದಲ್ಲಿ ಅನುಸರಿಸಬೇಕಾದ ನೀತಿ ನಿಯಮಾವಳಿಗಳನ್ನು ಸಂಸತ್ತು ನಿರ್ಧರಿಸುತ್ತದೆ.

ಕೆಲವು ಸಂದರ್ಭಗಳಲ್ಲಿ ಸಲಹಾ ಮಂಡಳಿಯ ಒಪ್ಪಿಗೆ ಇಲ್ಲದೆ ಸಂಸತ್ತು ಬಂಧಿತನನ್ನು 3 ತಿಂಗಳಿಗಿಂತ ಹೆಚ್ಚು ಕಾಲ ಸೆರೆಯಲ್ಲಿಡಬಹುದು. ಮತ್ತು ಪ್ರಿವೆಂಟಿವ್ ಡಿಟೆನ್ಷನ್ (ಮುನ್ನೆಚ್ಚರಿಕೆ ಬಂಧನ) ಅಡಿಯಲ್ಲಿ ಬಂಧಿತನಾದ ವ್ಯಕ್ತಿಯನ್ನು ಎಷ್ಟು ಕಾಲದವರೆಗೆ ಬಂಧನದಲ್ಲಿಡಬಹುದೆಂದು ಸಂಸತ್ತು ನಿರ್ಧರಿಸಬಹುದು.

ರಕ್ಷಣೆ, ವಿದೇಶಾಂಗ ವ್ಯವಹಾರ ಮತ್ತು ರಾಷ್ಟ್ರಿಯ ಭದ್ರತೆಗೆ ಸಂಬಂಧಿಸಿದ ವಿಷಯಗಳ ಕುರಿತು ಕಾನೂನು ಮಾಡುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ. ಉಳಿದ ವಿಷಯಗಳ ಮೇಲೆ ಕಾನೂನು ರಚಿಸುವ ಅಧಿಕಾರ ಕೇಂದ್ರ ಮತ್ತು ರಾಜ್ಯ ಶಾಸಕಾಂಗಗಳ ನಡುವೆ ಹಂಚಿಕೆಯಾಗಿದೆ.

ಪ್ರಮುಖ ಮುನ್ನೆಚ್ಚರಿಕೆ ಬಂಧನ ಕಾಯ್ದೆಗಳು

1974ಕಾಫಿಪೊಸಾ

1980ರಾಷ್ಟ್ರೀಯ ಭದ್ರತಾ ಕಾಯ್ದೆ

1967ಕಾನೂನ ಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ (ಯು.ಎ.ಪಿ.ಎ), 2019 ರಲ್ಲಿ 4ನೇ ಬಾರಿ ತಿದ್ದುಪಡಿ

3. ಶೋಷಣೆಯ ವಿರುದ್ಧ ಹಕ್ಕು (23-24)

23ಮಾನವರನ್ನು ಮಾರಾಟ ಮಾಡುವುದು, ಸ್ತ್ರೀಯರನ್ನು ಮತ್ತು ಮಕ್ಕಳನ್ನು ಅನೈತಿಕ ಕೆಲಸಗಳಿಗೆ ಬಳಸಿಕೊಳ್ಳುವುದು ಮತ್ತು ಯಾರಿಂದಲೇ ಆಗಲಿ ಬಲವಂತದ ದುಡಿಮೆ ಮಾಡಿಸುವುದನ್ನು ನಿಷೇಧಿಸುತ್ತದೆ.

ಈ ವಿಧಿಗೆ ಪೂರಕವಾದ ಕಾನೂನುಗಳು

1948ಕನಿಷ್ಟ ಕೂಲಿ ಕಾಯ್ದೆ

1956 - ಅನೈತಿಕ ಮಾರಾಟ ತಡೆ ಕಾಯ್ದೆ

1976ಜೀತಪದ್ಧತಿ ನಿರ್ಮೂಲನಾ ಕಾಯ್ದೆ

1976 - ಸಮಾನ ವೇತನ ಕಾಯ್ದೆ

24 - 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕಾರ್ಖಾನೆಗಳಲ್ಲಿ, ಗಣಿಗಳಲ್ಲಿ ಹಾಗೂ ಇನ್ನಿತರ ಹಾನಿಕಾರಕ ವೃತ್ತಿಗಳಲ್ಲಿ ತೊಡಗಿಸುವುದರ ಮೇಲೆ ನಿಷೇದ.

4. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು (25-28)

25 - ಯಾವುದೇ ಧರ್ಮವನ್ನು ಸ್ವೀಕರಿಸುವ, ಆಚರಿಸುವ ಹಕ್ಕು

26ತಮ್ಮ ಧರ್ಮವನ್ನು ಪ್ರಚಾರ ಮಾಡಲು, ಧಾರ್ಮಿಕ ಸಂಘ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳುವ ಸ್ವಾತಂತ್ರ್ಯ

27 - ಸರ್ಕಾರವು ಧಾರ್ಮಿಕ ತೆರಿಗೆ ಹಾಕುವಂತಿಲ್ಲ ಅಥವಾ ತೆರಿಗೆಯಿಂದ ಬಂದ ಹಣವನ್ನು ನಿರ್ದಿಷ್ಟ ಧರ್ಮಕ್ಕಾಗಿ ನೀಡುವಂತಿಲ್ಲ. ಒಂದು ಧರ್ಮದ ವಿರುದ್ಧ ಇನ್ನೊಂದು ಧರ್ಮವನ್ನು ಪ್ರೋತ್ಸಾಹಿಸುವಂತಿಲ್ಲ.

28 - ಸರ್ಕಾರದ ಅನುದಾನಕ್ಕೊಳಪಟ್ಟ ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆ ಮಾಡುವಂತಿಲ್ಲ. ಆದರೆ ಧಾರ್ಮಿಕ ಬೋಧನೆಗೆಂದೇ ಸ್ಥಾಪಿಸಲ್ಪಟ್ಟ ಸಂಸ್ಥೆಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಧಾರ್ಮಿಕ ಸಂಸ್ಥೆಗಳು ಯಾರನ್ನೂ ಸಹ ಬಲವಂತವಾಗಿ ಪೂಜಾ ಸಮಾರಂಭಗಳಲ್ಲಿ ಹಾಜರಾಗಬೇಕೆಂದು ನಿಯಮ ವಿಧಿಸುವಂತಿಲ್ಲ.

5. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು (29-30)

29 - ಅಲ್ಪಸಂಖ್ಯಾತರ ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆ. ಅಲ್ಪ ಸಂಖ್ಯಾತರು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕು.

30 - ಸರ್ಕಾರಿ ಅಥವಾ ಸರ್ಕಾರದಿಂದ ಅನುದಾನ ಪಡೆಯುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಧರ್ಮ, ಜನಾಂಗ, ಜಾತಿ ಅಥವಾ ಭಾಷಾ ಅಧಾರದ ಮೇಲೆ ಪ್ರವೇಶ ನಿರಾಕರಿಸುವಂತಿಲ್ಲ. ಸರ್ಕಾರವು ಸಹ ಈ ಅಂಶಗಳನ್ನು ಆಧರಿಸಿ ತಾರತಮ್ಯ ಮಾಡುವಂತಿಲ್ಲ.

311978 ರಲ್ಲಿ ಈ ಹಕ್ಕನ್ನು 300 (ಎ) ವಿಧಿಯನ್ವಯ ಕಾನೂನಾತ್ಮಕ ಹಕ್ಕನ್ನಾಗಿ ಮಾಡಲಾಗಿದೆ.

6. ಸಂವಿಧಾನಾತ್ಮಕ ಪರಿಹಾರಗಳ ಹಕ್ಕು (32)

32 ನೇ ಹಕ್ಕು ಮೇಲಿನ ಎಲ್ಲಾ ಹಕ್ಕುಗಳ ಮೇಲೆ ಯಾರೂ ಸಹ ಯಾವುದೇ ನಿರ್ಬಂಧ ಹೇರದಂತೆ ರಕ್ಷಣೆ ನೀಡುತ್ತದೆ. ಡಾ ಬಿ.ಆರ್.ಅಂಬೇಡ್ಕರ್ 32 ನೇ ವಿಧಿಯನ್ನು ಸಂವಿಧಾನದ ಆತ್ಮ ಮತ್ತು ಹೃದಯ ಎಂದು ಕರೆದಿರುವರು

ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ 32 ನೇ ವಿಧಿಯ ಅಡಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗುವ ಮೂಲಕ ರಕ್ಷಣೆ ಪಡೆಯಬಹುದು. ಸುಪ್ರೀಂ ಕೋರ್ಟ್ 32 ನೇ ವಿಧಿಯನ್ನು ಸಂವಿಧಾನದ ಮೂಲಭೂತ ಸಂರಚನೆ ಎಂದು ಭಾವಿಸಿದೆ.

359 ನೆ ವಿಧಿಯನ್ವಯ 20 ಮತ್ತು 21 ನೇ ವಿಧಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಹಕ್ಕುಗಳನ್ನು ನಿರ್ಬಂಧಿಸುವ ಮತ್ತು ಯಾರೂ ಸಹ ಮೂಲಭೂತ ಹಕ್ಕುಗಳಿಗಾಗಿ ಸುಪ್ರೀಂ ಕೋರ್ಟ್ ನ ಮೊರೆ ಹೋಗದಂತೆ ರಾಷ್ಟ್ರಪತಿ ನಿರ್ಬಂಧ ಹೇರಬಹುದಾಗಿದೆ.

ರಿಟ್ ಗಳು

ಸುಪ್ರೀಂಕೋರ್ಟ್ ಗೆ ರಿಟ್ ಅರ್ಜಿಗಳನ್ನು ಮಾತ್ರ ಜಾರಿಗೊಳಿಸಲು ಹಕ್ಕಿದೆ, ರಾಜ್ಯ ಹೈಕೋರ್ಟ್‍ಗಳಿಗೆ ರಿಟ್ ಗಳ ಜೊತೆಗೆ ಇತರ ರಿಟ್ ಗಳನ್ನು ಜಾರಿಗೊಳಿಸುವ ಅಧಿಕಾರವೂ ಇದೆ. ರಿಟ್ ಗಳನ್ನು ಜಾರಿಗೊಳಿಸುವಲ್ಲಿ ಸುಪ್ರೀಂ ಕೋರ್ಟ್ ನ ವ್ಯಾಪ್ತಿ ಹೈಕೋರ್ಟ್ ಗಿಂತಲೂ ಕಡಿಮೆ ವ್ಯಾಪ್ತಿಯದು

ಭೂಪ್ರದೇಶದ ವಿಸ್ತೀರ್ಣಕ್ಕೆ ಬಂದಾಗ ರಿಟ್ ಗಳನ್ನು ಹೊರಡಿಸುವಲ್ಲಿ ಸುಪ್ರೀಂ ಕೋರ್ಟ್ ನ ವ್ಯಾಪ್ತಿ ಹೈಕೋರ್ಟ್ ಗಿಂತಲೂ ವಿಶಾಲವಾದುದು. ಸುಪ್ರೀಂ ಕೋರ್ಟ್ ನ ವ್ಯಾಪ್ತಿ ಇಡೀ ದೇಶಕ್ಕೆ ಅನ್ವಯವಾದರೆ ಹೈಕೋಟ್ ನ ವ್ಯಾಪ್ತಿ ಅದರ ರಾಜ್ಯಕ್ಕೆ ಮಾತ್ರ ಸೀಮಿತವಾಗಿರುತ್ತದೆ.

ಮೂಲಭೂತ ಹಕ್ಕುಗಳ ಸಂರಕ್ಷಣೆಗಾಗಿ ಇರುವ 32 ನೇ ವಿಧಿಯನ್ವಯ ರಿಟ್ ಗಳನ್ನು ಚಲಾಯಿಸುವುದು ಸುಪ್ರೀಂ ಕೋರ್ಟ್ನ ಮುಖ್ಯ ಕರ್ತವ್ಯವಾಗಿದ್ದು ಅದನ್ನು ಸುಪ್ರೀಂಕೋರ್ಟ್ ಸಹ ನಿರಾಕರಿಸುವಂತಿಲ್ಲ. ಆದರೆ ಹೈಕೋರ್ಟ್‍ಗಳು ರಿಟ್ ಅನ್ನು ಹೊರಡಿಸುವುದು ವಿವೇಚನಾಧಿಕಾರಕ್ಕೆ ಬಿಟ್ಟಿದ್ದು. ಹೈಕೋರ್ಟ್ ಗಳು ರಿಟ್ ಹೊರಡಿಸುವುದನ್ನು ನಿರಾಕರಿಸಬಹುದು.

ಬಂಧಿ ಪ್ರತ್ಯಕ್ಷೀಕರಣ (ಹೇಬಿಯಸ್ ಕಾರ್ಪಸ್) : ಯಾವುದೇ ವ್ಯಕ್ತಿಯನ್ನು ಬಂಧಿಸಿದ 24 ಗಂಟೆಗಳ ಒಳಗೆ ಹತ್ತಿರದ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕು.

ಪರಮಾದೇಶ (ಮ್ಯಾಂಡಮಸ್) : ನಾವು ಆದೇಶಿಸುತ್ತಿದ್ದೇವೆ ಎಂಬುದು ಈ ಪದದ ಅರ್ಥ. ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದ ಸಾರ್ವಜನಿಕ ಅಧಿಕಾರಿ ಅಥವಾ ಸಂಸ್ಥೆಯ ವಿರುದ್ಧ ನ್ಯಾಯಾಲಯವು ಪರಮಾದೇಶವನ್ನು ಹೊರಡಿಸಬಹುದು. ಆದರೆ ಖಾಸಗಿ ವ್ಯಕ್ತಿ/ಸಂಸ್ಥೆ, ಶಾಸನಾತ್ಮಕ ಕಾನೂನುಗಳು, ವಿವೇಚನಾಧಿಕಾರಗಳು, ರಾಷ್ಟ್ರಪತಿ ಮತ್ತು ರಾಜ್ಯಪಾಲರ ಮೇಲೆ ಇದನ್ನು ಪ್ರಯೊಗಿಸಲು ಸಾಧ್ಯವಿಲ್ಲ

ಪ್ರತಿಬಂಧಕಾಜ್ಞೆ (ಪ್ರೊಹಿಬಿಷನ್) : ಕೆಳ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಅಧಿಕಾರ ಚಲಾಯಿಸುವುದನ್ನು ಮೇಲಿನ ನ್ಯಾಯಾಲಯವು ತಡೆಹಿಡಿಯುವುದನ್ನು ಪ್ರತಿಬಂಧಕಾಜ್ಞೆ ಎನ್ನುವರು.

ಸರ್ಷಿಯೋರರಿ (ಉತ್ಪ್ರೇಕ್ಷಣಾ ಲೇಖನ) : ಕೆಳ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಅಥವಾ ತಮ್ಮ ವ್ಯಾಪ್ತಿಯಲ್ಲಿರುವ ವಿಷಯದ ಬಗ್ಗೆ ದೋಷಪೂರಿತ ತೀರ್ಪು ನೀಡಿದಾಗ ಆ ವಿಷಯವನ್ನು ಮೇಲಿನ ನ್ಯಾಯಾಲಯವು ತನ್ನ ಅಧೀನಕ್ಕೆ ತೆಗೆದುಕೊಂಡು ತೀರ್ಪು ನೀಡುವುದನ್ನು ಉತ್ಪ್ರೇಕ್ಷಣಾ ಲೇಖನ ಎನ್ನುವರು.

ಕೋ ವಾರೆಂಟೊ : ಒಬ್ಬ ವ್ಯಕ್ತಿಯು ತನ್ನ ಅರ್ಹತೆಯನ್ನು ಮೀರಿ ಸಾರ್ವಜನಿಕ ಹುದ್ದೆಯನ್ನು ಹೊಂದಿದ್ದರೆ ಅವನ ಅರ್ಹತೆಯ ಬಗ್ಗೆ ವಿಚಾರಣೆ ನಡೆಸುವುದೇ ಕೋ ವಾರೆಂಟೊ ಎನ್ನುವರು.

33 - ಸಶಸ್ತ್ರ ಪಡೆಗಳು, ಅರೆ ಸೇನಾ ಪಡೆಗಳು, ಪೊಲೀಸ್ ಪಡೆಗಳು, ಮತ್ತು ಗುಪ್ತಚರ ವಿಭಾಗ ಇವುಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸುವ ಅಧಿಕಾರ ಸಂಸತ್ತಿಗಿದೆ. ಈ ವಿಧಿಯಡಿಯಲ್ಲಿ ಕಾನೂನು ರೂಪಿಸುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ.

33ನೇ ವಿಧಿಗೆ ಪೂರಕವಾದ ಕೆಲವು ಕಾನೂನುಗಳು

1950ಆರ್ಮಿ ಆ್ಯಕ್ಟ್

1966 - ದಿ ಪೊಲೀಸ್ ಫೋರ್ಸ್ ಆ್ಯಕ್ಟ್ (ರಿಸ್ಟ್ರಿಕ್ಷನ್ ಆಫ್ ರೈಟ್ಸ್)

1968ಗಡಿ ಭದ್ರತಾ ಪಡೆ ಕಾಯ್ದೆ

34ಮಾರ್ಷಲ್ (ಮಿಲಿಟರಿ) ಕಾನೂನಿನ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖಿಸಲಾಗಿಲ್ಲ. ಆದರೆ ದೇಶದಲ್ಲಿ ಆಂತರಿಕ ಗಲಭೆ, ಯುದ್ದ ಮುಂತಾದ ಸನ್ನಿವೇಶಗಳಲ್ಲಿ ದೇಶದ ಯಾವುದೇ ಭಾಗದಲ್ಲಿ ಮಾರ್ಷಲ್ ಕಾನೂನು ಜಾರಿ ಮಾಡುವ ಮತ್ತು ಆ ಭಾಗದಲ್ಲಿ ಈ ವಿಧಿಯನ್ವಯ ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ ಹಾಕುವ ಅಧಿಕಾರವನ್ನ ಸಂಸತ್ತಿಗೆ ನೀಡಲಾಗಿದೆ. ಈ ಅಧಿಕಾರವನ್ನು ಆ್ಯಕ್ಟ್ ಆಫ್ ಇಂಡೆಮ್ನಿಟಿ ಎಂದು ಕರೆಯಲಾಗಿದ್ದು ಇದರ ವಿರುದ್ಧ ಯಾವುದೇ  ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.

35 ಈ ವಿಧಿಯನ್ವಯ ಮೂಲಭೂತ ಹಕ್ಕುಗಳನ್ನು ಮಾಡುವ ಅಧಿಕಾರ ಕೇವಲ ಸಂಸತ್ತಿಗೆ ಮಾತ್ರ ನೀಡಲಾಗಿದೆ. ರಾಜ್ಯ ಶಾಸಕಾಂಗಗಳಿಗೆ ನೀಡಲಾಗಿಲ್ಲ.

ಕಾಮೆಂಟ್‌ಗಳು