ಭಾಗ 1 - ರಾಜ್ಯಗಳ ಸಂಘ ಭಾರತ

ಭಾಗ 1 - ರಾಜ್ಯಗಳ ಸಂಘ ಭಾರತ

ಭಾರತದ ಏಕೀಕರಣ

ಭಾರತವು ಸ್ವಾತಂತ್ರ್ಯವಾದಾಗ ಒಟ್ಟು 562 ದೇಶೀಯ ಸಂಸ್ಥಾನಗಳಿದ್ದವು. ಸರ್ದಾರ್ ವಲ್ಲಭಬಾಯಿ ಪಟೇಲ್‍ರು ದೇಶೀಯ ಸಂಸ್ಥಾನಗಳನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದರು ಹೀಗೆ ಒಕ್ಕೂಟಕ್ಕೆ ಸೇರಿದ ಮೊದಲ ಸಂಸ್ಥಾನ ಕೊಚ್ಚಿ. ಆದರೆ ಜುನಾಗಡ, ಹೈದರಾಬಾದ್ ಮತ್ತು ಕಾಶ್ಮೀರ ಸಂಸ್ಥಾನಗಳು ಭಾರತಕ್ಕೆ ಸೇರಲು ನಿರಾಕರಿಸಿದವು.

ಹೈದರಾಬಾದ್ ನಿಜಾಮ ಒಸ್ಮಾನ್ ಅಲಿಖಾನ್ ಭಾರತ ಒಕ್ಕೂಟಕ್ಕೆ ಸೇರಲು ನಿರಾಕರಿಸಿದಾಗ ಆಪರೇಷನ್ ಪೋಲೋ ಕಾರ್ಯಾಚರಣೆ ಮೂಲಕ ಪಟೇಲ್‍ರು 1947 ಸೆಪ್ಟೆಂಬರ್ 17 ರಂದು ಹೈದರಾಬಾದ್ ಸಂಸ್ಥಾನವನ್ನು ಭಾರತ ಒಕ್ಕೂಟಕ್ಕೆ ಸೇರಿಸಿದರು. ಹಾಗಾಗಿ ಸೆಪ್ಟೆಂಬರ್ 17 ಅನ್ನು ಹೈದರಾಬಾದ್ ಕರ್ನಾಟಕ ವಿಮೋಚನಾ ದಿನವನ್ನಾಗಿ ಆಚರಿಸಲಾಗುತ್ತದೆ.

ಕಾಶ್ಮೀರದ ಅರಸ ಹರಿಸಿಂಗ್ ಸ್ವತಂತ್ರವಾಗಿರಲು ಬಯಸಿದನಾದರೂ ಪಾಕಿಸ್ತಾನದ ಆಕ್ರಮಣದಿಂದ ಹೆದರಿ 1947 ಅಕ್ಟೋಬರ್ 26 ರಂದು ಭಾರತದ ಒಕ್ಕೂಟಕ್ಕೆ ಸೇರಿದನು. ಅಕ್ಟೋಬರ್ 26 ಅನ್ನು Accession Day ಎನ್ನುವರು.

ಜುನಾಗಡವನ್ನು ಮತದಾನದ ಮೂಲಕ 1947 ನವೆಂಬರ್ 9 ರಂದು ಸೇರ್ಪಡೆ ಮಾಡಲಾಯಿತು.

ಭಾಷಾವಾರು ಪ್ರಾಂತ್ಯಗಳ ರಚನೆ

ಸ್ವಾತಂತ್ರ್ಯಾನಂತರ ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳನ್ನು ರಚಿಸಬೇಕೆಂಬ ಬೇಡಿಕೆಗಳು ಬಂದಾಗ 1946 ರಲ್ಲಿ ಧಾರ್ ಆಯೋಗ ರಚಿಸಲಾಯಿತು. ಆದರೆ ಧಾರ್ ಆಯೋಗ ಭಾಷಾವಾರು ಪ್ರಾಂತ್ಯಗಳ ರಚನೆಗಿಂತ ಆಡಳಿತಕ್ಕನುಕೂಲವಾಗಿ ಪ್ರಾಂತ್ಯಗಳನ್ನು ರಚಿಸುವುದು ಉತ್ತಮವೆಂದು ಈ ಬೇಡಿಕೆಯನ್ನು ತಿರಸ್ಕರಿಸಿತು.

1948 ರಲ್ಲಿ ರಚನೆಯಾದ ಜೆ.ವಿ.ಪಿ ಸಮಿತಿ (ಜವಾಹರ್ ಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಪಟ್ಟಾಭಿ ಸೀತಾರಾಮಯ್ಯ) ಸಹ ಧಾರ್ ಆಯೋಗದ ವರಧಿಯನ್ನೇ ಬೆಂಬಲಿಸಿತು.

ಆದರೆ ದೇಶಾದ್ಯಂತ ಹೋರಾಟಗಳು ಹೆಚ್ಚಾದಾಗ 1953 ರಲ್ಲಿ ಫಜಲ್ ಅಲಿ ಆಯೋಗವನ್ನು ರಚಿಸಲಾಯಿತು. 1956 ರಲ್ಲಿ ಈ ಆಯೋಗದ ವರದಿಯನ್ನಾಧರಿಸಿ ಭಾಷಾವಾರು ಪ್ರಾಂತ್ಯಗಳನ್ನಾಗಿ ವಿಂಗಡಿಸಲಾಯಿತು. ಈ ಆಯೋಗದ ಅಧ್ಯಕ್ಷರಾಗಿ ಫಜಲ್ ಅಲಿ ನಿಯುಕ್ತವಾಗಿದ್ದರು. ಕೆ.ಎಂ ಫಣಿಕ್ಕರ್ ಮತ್ತು ಎಚ್.ಎನ್ ಕುಂಜ್ರು ಈ ಆಯೋಗದ ಸದಸ್ಯರಾಗಿದ್ದರು.

1956 ನವೆಂಬರ್ 1 ರಂದು ಸಂವಿಧಾನದ 7ನೇ ತಿದ್ದುಪಡಿ ಮೂಲಕ ರಾಜಪುನರ್ವಿಂಗಡಣಾ ಕಾನೂನನ್ನು ಜಾರಿಗೆ ತರಲಾಯಿತು

1956 ರಲ್ಲಿ 14 ರಾಜ್ಯಗಳು ಹಾಗೂ 6 ಕೇಂದ್ರಾಡಳಿತ ಪ್ರದೇಶಗಳು ಅಸ್ಥಿತ್ವಕ್ಕೆ ಬಂದವು.

ರಾಜ್ಯಗಳು : ಆಂಧ್ರಪ್ರದೇಶ, ಅಸ್ಸಾಂ, ಬಾಂಬೆ, ಮಧ್ಯಪ್ರದೇಶ, ಮೈಸೂರು, ಮದ್ರಾಸ್, ಜಮ್ಮು ಕಾಶ್ಮೀರ, ಕೇರಳ, ಪಶ್ಚಿಮ ಬಂಗಾಳ, ರಾಜಸ್ತಾನ, ಪಂಜಾಬ್, ಉತ್ತರ ಪ್ರದೇಶ, ಒಡಿಶಾ, ಬಿಹಾರ

ಕೇಂದ್ರಾಡಳಿತ ಪ್ರದೇಶಗಳು : ದೆಹಲಿ, ಮಣಿಪುರ, ಅಂಡಮಾನ್ ನಿಕೋಬಾರ್, ತ್ರಿಪುರ, ಲಕ್ಷದ್ವೀಪ, ಹಿಮಾಚಲ ಪ್ರದೇಶ

ಭಾಗ 1 - ವಿಧಿಗಳು 

ವಿಧಿ 1  ಇಂಡಿಯಾ ಎಂದರೆ ಭಾರತ ಎಂದು ರಾಜ್ಯಕ್ಷೇತ್ರದ ಹೆಸರನ್ನು ಸೂಚಿಸುತ್ತದೆ (ಸಂವಿಧಾನದಲ್ಲಿ ದೇಶ ಎಂಬ ಪದದ ಬದಲಾಗಿ ರಾಜ್ಯ/ರಾಜ್ಯಕ್ಷೇತ್ರ ಎಂಬ ಪದವನ್ನು ಬಳಸಲಾಗುತ್ತದೆ.) ಮತ್ತು ಭಾರತವು ರಾಜ್ಯಗಳ ಸಂಘವಾಗಿದೆ ಅಥವಾ ಒಕ್ಕೂಟವಾಗಿದೆ.

ಭಾರತದಲ್ಲಿ 28 ರಾಜ್ಯಗಳು ಮತ್ತು  8 ಕೇಂದ್ರಾಡಳಿತ ಪ್ರದೇಶಗಳಿವೆ.

ವಿಧಿ 2 - ಸಂಸತ್ತು ಹೊಸ ರಾಜ್ಯಗಳನ್ನು ತನ್ನ ದೇಶದ ಭೂಭಾಗದೊಳಗೆ ಸೇರಿಸಿಕೊಳ್ಳಬಹುದು ಮತ್ತು ಹೊಸ ರಾಜ್ಯಗಳನ್ನು ಸ್ಥಾಪಿಸಬಹುದು.

ವಿಧಿ 3 - ಸಂಸತ್ತು ಹೊಸ ರಾಜ್ಯಗಳನ್ನು ಸೃಷ್ಟಿಸುವ, ರಾಜ್ಯಗಳ ಹೆಸರನ್ನು ಮತ್ತು ಗಡಿಗಳನ್ನು ಬದಲಾಯಿಸುವ, 2 ಅಥವಾ ಕ್ಕಿಂತ ಹೆಚ್ಚು ರಾಜ್ಯಗಳನ್ನು ಅಥವಾ ಅವುಗಳ ಭೂಭಾಗಗಳನ್ನು ಸೇರಿಸಿ ಹೊಸ ರಾಜ್ಯವನ್ನು ಸೃಷ್ಟಿಸುವ, ಒಂದು ರಾಜ್ಯದ ವಿಸ್ತೀರ್ಣವನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಅಧಿಕಾರವನ್ನು ಹೊಂದಿದೆ. ಈ ಬದಲಾವಣೆಗೆ ಮೊದಲು ರಾಷ್ಟ್ರಪತಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ನಂತರ ಯಾವ ರಾಜ್ಯದ ಹೆಸರು ಅಥವಾ ಗಡಿಯನ್ನು ಬದಲಾಯಿಸಬೇಕಿದೆಯೋ ಆ ರಾಜ್ಯದ ವಿಧಾನಸಭೆಯಲ್ಲಿ ನಿರ್ದಿಷ್ಟ ಸಮಯದೊಳಗೆ ಅಭಿಪ್ರಾಯ ಮಂಡಿಸಲು ರಾಷ್ಟ್ರಪತಿಗಳು ಅವಕಾಶ ನೀಡುತ್ತಾರೆ. ರಾಜ್ಯ ಶಾಸಕಾಂಗದ ನಿರ್ಧಾರವನ್ನು ರಾಷ್ಟ್ರಪತಿಗಳು ಒಪ್ಪಬಹುದು ಅಥವಾ ತಿರಸ್ಕರಿಸಬಹುದು. ಸಂಸತ್ತಿನಲ್ಲಿ ಅರ್ಧಕ್ಕಿಂತ ಹೆಚ್ಚು ಸದಸ್ಯರ ಬೆಂಬಲ ಪಡೆಯುವ ಸರಳ ಬಹುಮತದ ಮೂಲಕ ಈ ಮೇಲಿನ ಪ್ರಕ್ರಿಯೆಗಳಿಗೆ ಮಸೂದೆಗಳನ್ನು ಅಂಗೀಕರಿಸಿ ಜಾರಿಗೆ ತರಬಹುದು. ಇದಕ್ಕೆ 268 ನೇ ವಿಧಿಯ ಪ್ರಕಾರ ವಿಶೇಷ ಬಹುಮತ ಪಡೆದು ತಿದ್ದುಪಡಿ ಮಾಡುವ ಅವಶ್ಯಕತೆ ಇಲ್ಲ.

ವಿಧಿ 4  2 ಮತ್ತು 3 ನೇ ವಿಧಿಗಳು ಜಾರಿಗೆ ತರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸುತ್ತದೆ. ಭಾರತವು ತನ್ನ ಗಡಿಯನ್ನು ಇತರ ದೇಶದ ಗಡಿಗಳೊಂದಿಗೆ ಹಂಚಿಕೊಳ್ಳಬೇಕಾದರೆ ಸಂವಿಧಾನದ ತಿದ್ದುಪಡಿ ಮಾಡುವ ಅವಶ್ಯಕತೆಯಿಲ್ಲವೆಂದು 1969 ರಲ್ಲಿ ಸುಪ್ರೀಂ ಕೋರ್ಟ್ (ಮುಖ್ಯ ನ್ಯಾಯಾಧೀಶರು ಎಂ ಹಿದಾಯತುಲ್ಲಾ) ತೀರ್ಪು ನೀಡಿದೆ.

ಕಾಮೆಂಟ್‌ಗಳು