ರಾಸಾಯನಿಕ ಕ್ರಿಯೆಗಳು

ರಾಸಾಯನಿಕ ಕ್ರಿಯೆಗಳು

ಭೌತ ಬದಲಾವಣೆ : ವಸ್ತುವಿನ ಗುಣದಲ್ಲಿ ಬದಲಾವಣೆಯಾಗುವುದಿಲ್ಲ, ಹೊಸ ವಸ್ತು ಉತ್ಪತ್ತಿ ಆಗುವುದಿಲ್ಲ. ಇವುಗಳನ್ನು ಕೇವಲ ಭೌತ ವಿಧಾನಗಳಿಂದ ಬೇರ್ಪಡಿಸಬಹುದು

ಉದಾ : ಕಲ್ಲನ್ನು ಕುಟ್ಟಿ ಪುಡಿ ಮಾಡುವುದು, ಮರದ ದಿಮ್ಮಿಯ ನ್ನು ಕತ್ತರಿಸಿ ಹೋಳು ಮಾಡುವುದು ಇತ್ಯಾದಿ

ರಾಸಾಯನಿಕ ಬದಲಾವಣೆ : ವಸ್ತುವಿನ ಗುಣದಲ್ಲಿ ಬದಲಾವಣೆಯಾಗುತ್ತದೆ. ಇಲ್ಲಿ ಹೊಸ ವಸ್ತು ಉತ್ಪತ್ತಿಯಾಗುತ್ತದೆ. ಇವುಗಳನ್ನು ರಾಸಾಯನಿಕ ವಿಧಾನದಿಂದ ಮಾತ್ರ ಬೇರ್ಪಡಿಸಲು ಸಾಧ್ಯ

ಉದಾ : ಕಾಯಿ ಹಣ್ಣಾಗುವುದು, ಹಾಲು ಹುಳಿಯಾಗುವುದು, ಕಟ್ಟಿಗೆ ಸುಡುವುದು ಇತ್ಯಾದಿ

ರಾಸಾಯನಿಕ ಕ್ರಿಯೆಯ ವಿಧಗಳು

ರಾಸಾಯನಿಕ ಸಂಯೋಗ

2 ಅಥವಾ 2ಕ್ಕಿಂತ ಹೆಚ್ಚು ಧಾತುಗಳು ಅಥವಾ ಸಂಯುಕ್ತಗಳು ಸೇರಿ ಒಂದು ಹೊಸ ಉತ್ಪನ್ನವನ್ನು ಉಂಟುಮಾಡುವುದನ್ನು ರಾಸಾಯನಿಕ ಸಂಯೋಗ ಎನ್ನುವರು.

ಬಹುತೇಕ ರಾಸಾಯನಿಕ ಸಂಯೋಗ ಕ್ರಿಯೆಗಳು ಉಷ್ಣಕ್ಷೇಪಕ ಕ್ರಿಯೆಗಳಾಗಿವೆ. ರಾಸಾಯನಿಕ ಕ್ರಿಯೆ ನಡೆಯುವಾಗ ಉಷ್ಣವು ಬಿಡುಗಡೆಯಾದರೆ ಅಂತಹ ಕ್ರಿಯೆಯನ್ನು ಉಷ್ಣಕ್ಷೇಪಕ ಕ್ರಿಯೆ/ಬಹಿರುಷ್ಣಕ ಕ್ರಿಯೆ ಎನ್ನುವರು.

ಕ್ಯಾಲ್ಷಿಯಂ ಆಕ್ಸೈಡ್ (ಸಂಯುಕ್ತ) + ನೀರು (ಸಂಯುಕ್ತ) = ಕ್ಯಾಲ್ಷಿಯಂ ಹೈಡ್ರಾಕ್ಸೈಡ್ (ಸಂಯುಕ್ತ)
ಕಾರ್ಬನ್ (ಧಾತು) + ಆಕ್ಸಿಜನ್ (ಧಾತು) = ಕಾರ್ಬನ್ ಡೈ ಆಕ್ಸೈಡ್ (ಸಂಯುಕ್ತ)
ಸೀಸದ ಸಲ್ಫೇಟ್ (ಸಂಯುಕ್ತ) + ಆಕ್ಸಿಜನ್ (ಧಾತು) = ನೀರು (ಸಂಯುಕ್ತ)

ರಾಸಾಯನಿಕ ವಿಭಜನೆ

ಒಂದು ಸಂಯುಕ್ತವು 2 ಅಥವಾ 2ಕ್ಕಿಂತ ಹೆಚ್ಚು ಸಂಯುಕ್ತ ಅಥವಾ ಧಾತುಗಳಾಗಿ ವಿಭಜನೆ ಹೊಂದುವುದನ್ನು ರಾಸಾಯನಿಕ ವಿಭಜನೆ ಎನ್ನುವರು. ಉಷ್ಣ, ಬೆಳಕು ಅಥವಾ ವಿದ್ಯುತ್ ಅನ್ನು ಹರಿಸುವುದರ ಮೂಲಕ ರಾಸಾಯನಿಕ ವಿಭಜನೆ ಕ್ರಿಯೆಗಳನ್ನು ಮಾಡುತ್ತಾರೆ. ವಿಭಜನೆ ಕ್ರಿಯೆಯನ್ನು ಉಷ್ಣದ ಮೂಲಕ ನಡೆಸಿದರೆ ಉಷ್ಣ ವಿಭಜನ ಕ್ರಿಯೆ ಎನ್ನುವರು.

ಬಹುತೇಕ ರಾಸಾಯನಿಕ ವಿಭಜನೆ ಕ್ರಿಯೆಗಳು ಉಷ್ಣಗ್ರಾಹಕ ಕ್ರಿಯೆಗಳಾಗಿವೆ. ರಾಸಾಯನಿಕ ಕ್ರಿಯೆ ನಡೆಯುವಾಗ ಉಷ್ಣವನ್ನು ಹೀರಿಕೊಂಡರೆ ಅಂತಹ ಕ್ರಿಯೆಯನ್ನು ಉಷ್ಣಗ್ರಾಹಕ ಕ್ರಿಯೆ/ಅಂತರುಷ್ಣಕ ಕ್ರಿಯೆ ಎನ್ನುವರು.

ಉದಾ : ಸೋಡಿಯಂ ಬೈ ಕಾರ್ಬೋನೇಟ್ (ಉಷ್ಣ) = ಸೋಡಿಯಂ ಕಾರ್ಬೋನೇಟ್ + ಕಾರ್ಬನ್ ಡೈ ಆಕ್ಸೈಡ್ + ನೀರು

ಪೊಟ್ಯಾಷಿಯಂ ಕ್ಲೋರೇಟ್ (ಉಷ್ಣ) = ಪೊಟ್ಯಾಷಿಯಂ ಕ್ಲೋರೈಡ್ + ಆಕ್ಸಿಜನ್. ಇಲ್ಲಿ ನೀಡಿರುವ ಉದಾಹರಣಾ ಕ್ರಿಯೆಯು ನಿಧಾನವಾಗಿ ನಡೆಯುವುದರಿಂದ ವೇಗವಾಗಿ ನಡೆಯುವಂತೆ ಮಾಡಲು ಮ್ಯಾಂಗನೀಸ್ ಡೈ ಆಕ್ಸೈಡನ್ನು ಕ್ರಿಯಾವರ್ಧಕವಾಗಿ ಬಳಸುತ್ತಾರೆ)

ರಾಸಾಯನಿಕ ಸ್ಥಾನಪಲ್ಲಟ

ಒಂದು ಸಂಯುಕ್ತದಿಂದ ಕಡಿಮೆ ಕ್ರಿಯಾಶೀಲವಾಗಿರುವ ಧಾತುವನ್ನು ಹೆಚ್ಚು ಕ್ರಿಯಾಶಿಲವಾಗಿರುವ ಧಾತುವೊಂದು ಸ್ಥಾನಪಲ್ಲಟಗೊಳಿಸುವ ರಾಸಾಯನಿಕ ಬದಲಾವಣೆಯನ್ನು ರಾಸಾಯನಿಕ ಸ್ಥಾನಪಲ್ಲಟ ಎನ್ನುವರು.

ಉದಾ : ತಾಮ್ರದ ಸಲ್ಫೇಟ್ + ಕಬ್ಬಿಣ = ತಾಮ್ರ + ಕಬ್ಬಿಣದ ಸಲ್ಫೇಟ್

ಇಲ್ಲಿ ತಾಮ್ರದ ಸಲ್ಫೇಟ್ ಸಂಯುಕ್ತದಲ್ಲಿರುವ ಸಲ್ಫರ್ ಸ್ಥಾನಪಲ್ಲಟದ ನಂತರ ಕಬ್ಬಿಣದ ಜೊತೆ ಸೇರಿ ಕಬ್ಬಿಣದ ಸಲ್ಫೇಟ್ ಆಗಿದೆ.

ಬೆಳ್ಳಿಯ ನೈಟ್ರೇಟ್ + ತಾಮ್ರ = ತಾಮ್ರದ ನೈಟ್ರೇಟ್ + ಬೆಳ್ಳಿ

ಇಲ್ಲಿ ಬೆಳ್ಳಿಯ ನೈಟ್ರೇಟ್ ಸಂಯುಕ್ತದಲ್ಲಿರುವ ನೈಟ್ರೇಟ್ ಸ್ಥಾನಪಲ್ಲಟದ ನಂತರ ತಾಮ್ರದ ಜೊತೆ ಸೇರಿ ತಾಮ್ರದ ನೈಟ್ರೇಟ್ ಆಗಿದೆ.

ರಾಸಾಯನಿಕ ದ್ವಿಸ್ಥಾನಪಲ್ಲಟ

2 ಸಂಯುಕ್ತಗಳು ದ್ರಾವಣ ಸ್ಥಿತಿಯಲ್ಲಿ (ದ್ರಾವಣ ಸ್ಥಿತಿ ಎಂದರೆ ನೀರಿನಲ್ಲಿ ಕರಗಿರುವ ಸ್ಥಿತಿ) ವರ್ತಿಸಿ ಅಯಾನುಗಳ ಪರಸ್ಪರ ವಿನಿಮಯದಿಂದ 2 ಹೊಸ ಸಂಯುಕ್ತಗಳನ್ನು ಉಂಟುಮಾಡುವ ರಾಸಾಯನಿಕ ಕ್ರಿಯೆಯನ್ನು ರಾಸಾಯನಿಕ ದ್ವಿಸ್ಥಾನಪಲ್ಲಟ/ದ್ವಿವಿಭಜನೆ ಎನ್ನುವರು.

ಇದರಲ್ಲಿ 2 ವಿಧಗಳಿವೆ

ಒತ್ತರ ಉಂಟುಮಾಡುವ ಕ್ರಿಯೆ/ಪ್ರಕ್ಷೇಪನ

2 ಸಂಯುಕ್ತಗಳು ತಮ್ಮ ಜಲೀಯ (ಜಲೀಯ ಎಂದರೆ ನೀರಿನಲ್ಲಿರುವ ದ್ರಾವಣ ರೂಪ) ಸ್ಥಿತಿಯಲ್ಲಿ ವರ್ತಿಸಿ, ನೀರಿನಲ್ಲಿ ಕರಗದ ಒಂದು ಲವಣವನ್ನು ಉಂಟುಮಾಡುವ ಕ್ರಿಯೆಗೆ ಒತ್ತರ ಉಂಟುಮಾಡುವ ಕ್ರಿಯೆ ಎನ್ನುವರು. ಇಲ್ಲಿ ನೀರಿನಲ್ಲಿ ಕರಗದ ವಸ್ತುವಿಗೆ ಪ್ರಕ್ಷೇಪ ಎನ್ನುವರು.

ಸೋಡಿಯಂ ಸಲ್ಫೇಟ್ + ಬೆರಿಲಿಯಂ ಕ್ಲೋರೈಡ್ = ಬೆರಿಲಿಯಂ ಸಲ್ಫೇಟ್ + ಸೋಡಿಯಂ ಕ್ಲೋರೈಡ್

ಇಲ್ಲಿ ಸೋಡಿಯಂ ಸಲ್ಫೇಟ್  ನಲ್ಲಿರುವ ಸಲ್ಫೇಟ್ ಮತ್ತು ಬೆರಿಲಿಯಂ ಕ್ಲೋರೈಡ್ ನಲ್ಲಿರುವ ಕ್ಲೋರೈಡ್ ಅದಲು ಬದಲಾಗಿ ಸ್ಥಾನ ಬದಲಾಯಿಸಿಕೊಂಡಿವೆ.

ತಟಸ್ಥೀಕರಣ ಕ್ರಿಯೆ

ಆಮ್ಲ ಮತ್ತು ಪ್ರತ್ಯಾಮ್ಲಗಳು ವರ್ತಿಸಿ ಲವಣ ಮತ್ತು ನೀರನ್ನು ಉಂಟುಮಾಡುವ ಕ್ರಿಯೆಗೆ ತಟಸ್ಥೀಕರಣ ಕ್ರಿಯೆ ಎನ್ನುವರು.

ಸೋಡಿಯಂ ಹೈಡ್ರಾಕ್ಸೈಡ್ + ಹೈಡ್ರೋಕ್ಲೋರಿಕ್ ಆಮ್ಲ = ಸೋಡಿಯಂ ಕ್ಲೋರೈಡ್ + ನೀರು

ಉತ್ಕರ್ಷಣ ಮತ್ತು ಅಪಕರ್ಷಣ

ಉತ್ಕರ್ಷಣ ಮತ್ತು ಅಪಕರ್ಷಣ ಕ್ರಿಯೆಗಳನ್ನು ರೆಡಾಕ್ಸ್ ಕ್ರಿಯೆಗಳು ಎನ್ನುವರು

ಉತ್ಕರ್ಷಣ : ರಾಸಾಯನಿಕ ಕ್ರಿಯೆಯಲ್ಲಿ ವಸ್ತುವೊಂದು ಆಮ್ಲಜನಕವನ್ನು ಪಡೆದುಕೊಂಡು ಜಲಜನಕವನ್ನು ಕಳೆದುಕೊಳ್ಳುವುದಾಗಿದೆ

ಅಪಕರ್ಷಣ : ರಾಸಾಯನಿಕ ಕ್ರಿಯೆಯಲ್ಲಿ ವಸ್ತುವೊಂದು ಜಲಜನಕವನ್ನು ಪಡೆದುಕೊಂಡು ಆಮ್ಲಜನಕವನ್ನು ಕಳೆದುಕೊಳ್ಳುವುದಾಗಿದೆ.

ಕಾಮೆಂಟ್‌ಗಳು