ರಾಸಾಯನಿಕ ಬಂಧ

ರಾಸಾಯನಿಕ ಬಂಧ

ತಮ್ಮ ಅತ್ಯಂತ ಹೊರಕವಚದ ಹೊರಗೆ 2 ಅಥವಾ 8 ಎಲೆಕ್ಟ್ರಾನ್‍ಗಳನ್ನು ಹೊಂದಿರುವ ಧಾತುಗಳನ್ನು ಜಡ ಅನಿಲಗಳು (ಇನರ್ಟ್ ಗ್ಯಾಸಸ್) /ಶ್ರೇಷ್ಟ ಅನಿಲಗಳು (ನೋಬಲ್ ಗ್ಯಾಸಸ್) ಎನ್ನುವರು. ಕಾರಣ ಈ ಧಾತುಗಳೆಲ್ಲ ಅನಿಲ ರೂಪದಲ್ಲಿವೆ.

ಈ ಧಾತುಗಳು ಯಾವುದೇ ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಕಾರಣ ಅವುಗಳು ಕವಚಗಳು ಪರಿಪೂರ್ಣವಾಗಿದ್ದು. ಬೇರೆ ಧಾತುಗಳಿಂದ ಎಲೆಕ್ಟ್ರಾನುಗಳನ್ನು ತೆಗೆದುಕೊಳ್ಳುವ ಅಥವಾ ಬೇರೆ ಧಾತುಗಳಿಗೆ ಎಲೆಕ್ಟ್ರಾನುಗಳನ್ನು ನೀಡುವ ಕ್ರಿಯೆ ನಡೆಯುವುದಿಲ್ಲ.

ಹೀಲಿಯಮ್, ನಿಯಾನ್, ಆರ್ಗಾನ್, ಕ್ರಿಪ್ಟಾನ್, ಕ್ಸೆನಾನ್ ಮತ್ತು ರೇಡಾನ್ ಗಳು ಜಡ ಅನಿಲಗಳಾಗಿವೆ. ಇವುಗಳಲ್ಲಿ ಹೀಲಿಯಮ್ ತನ್ನ ಹೊರ ಕವಚದಲ್ಲಿ 2 ಎಲೆಕ್ಟ್ರಾನ್‍ಗಳನ್ನು ಹೊಂದಿದ್ದು ಇದನ್ನು ಅವಳಿ ವಿನ್ಯಾಸ ಎನ್ನುವರು. ಉಳಿದ 5 ಧಾತುಗಳು 8 ಎಲೆಕ್ಟ್ರಾನ್‍ಗಳನ್ನು ಹೊಂದಿದ್ದು ಇದನ್ನು ಅಷ್ಟಕ ವಿನ್ಯಾಸ ಎನ್ನುವರು.


ಶ್ರೇಷ್ಟ ಅನಿಲಗಳಲ್ಲದ ಇತರ ಧಾತುಗಳ ಪರಮಾಣುಗಳು ಇನ್ನೊಂದು ಧಾತುವಿನ ಪರಮಾಣುಗಳಿಂದ ಎಲೆಕ್ಟ್ರಾನುಗಳನ್ನು ಪಡೆದುಕೊಂಡು ಅಥವಾ ಇನ್ನೊಂದು ಧಾತುವಿನ ಪರಮಾಣುವಿಗೆ ಎಲೆಕ್ಟ್ರಾನುಗಳನ್ನು ನೀಡಿ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತವೆ. ಈ ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ಆ ಧಾತುಗಳ ನಡುವಿನ ಆಕರ್ಷಣಾ ಬಲ ಕೆಲಸ ಮಾಡುತ್ತದೆ. ಈ ಆಕರ್ಷಣಾ ಬಲವನ್ನೇ ರಾಸಾಯನಿಕ ಬಂಧ ಎನ್ನುವರು.

ರಾಸಾಯನಿಕ ಬಂಧದಲ್ಲಿ 2 ವಿಧಗಳಿವೆ

ಇಲೆಕ್ಟ್ರೋವೇಲೆಂಟ್ ಬಂಧ/ಅಯಾನಿಕ್ ಬಂಧ

ಒಂದು ಧಾತುವಿನ ಪರಮಾಣುವಿನಿಂದ ಇನ್ನೊಂದು ಧಾತುವಿನ ಪರಮಾಣುವಿಗೆ ಎಲೆಕ್ಟ್ರಾನುಗಳು ವರ್ಗಾವಣೆಯಾಗಿ ಏರ್ಪಡುವ ಬಂಧವನ್ನು ಅಯಾನಿಕ್ ಬಂಧ ಎನ್ನುವರು. ಇಂತಹ ಬಂಧದ ಮೂಲಕ ಉಂಟಾದ ಸಂಯುಕ್ತಗಳನ್ನು ಅಯಾನಿಕ್ ಸಂಯುಕ್ತಗಳು ಎನ್ನುವರು.

ಎಲೆಕ್ಟ್ರಾನ್‍ಗಳನ್ನು ನೀಡುವ ಧಾತುವಿನ ಪರಮಾಣುವಿನ ಅತ್ಯಂತ ಹೊರಭಾಗದಲ್ಲಿ 1, 2 ಅಥವಾ 3 ಎಲೆಕ್ಟ್ರಾನುಗಳಿದ್ದು ಸುಲಭವಾಗಿ ಎಲೆಕ್ಟ್ರಾನುಗಳನ್ನು ಕಳೆದುಕೊಳ್ಳುವಂತಿರಬೇಕು ಹಾಗೆಯೇ ಎಲೆಕ್ಟ್ರಾನ್‍ಗಳನ್ನು ಪಡೆಯುವ ಧಾತುವಿನ ಪರಮಾಣುವಿನ ಅತ್ಯಂತ ಹೊರಭಾಗದಲ್ಲಿ 5, 6 ಅಥವಾ 7 ಎಲೆಕ್ಟ್ರಾನುಗಳಿದ್ದು ಸುಲಭವಾಗಿ ಎಲೆಕ್ಟ್ರಾನುಗಳನ್ನು ಪಡೆದುಕೊಳ್ಳುವಂತಿರಬೇಕು ಆಗ ಅಯಾನಿಕ್ ಬಂಧ ಏರ್ಪಡುತ್ತದೆ.


ಸೋಡಿಯಂ (11 ಎಲೆಕ್ಟ್ರಾನುಗಳು) ಮತ್ತು ಕ್ಲೋರಿನ್ (17 ಎಲೆಕ್ಟ್ರಾನುಗಳು) ಸೇರಿ ಸೋಡಿಯಂ ಕ್ಲೋರೈಡ್ ಆಗುತ್ತದೆ. ಇಲ್ಲಿ ಸೋಡಿಯಂ ನ ಮೊದಲ ಕವಚದಲ್ಲಿ 2 ಎಲೆಕ್ಟ್ರಾನುಗಳು ಮತ್ತು 2ನೇ ಕವಚದಲ್ಲಿ 8 ಎಲೆಕ್ಟ್ರಾನುಗಳು ಹಾಗೂ 3 ನೇ ಕವಚದಲ್ಲಿ 1 ಎಲೆಕ್ಟ್ರಾನು ಇರುತ್ತವೆ. ಹಾಗಯೇ ಕ್ಲೋರಿನ್ ನ ಮೊದಲ ಕವಚದಲ್ಲಿ 2 ಎಲೆಕ್ಟ್ರಾನುಗಳು ಮತ್ತು 2ನೇ ಕವಚದಲ್ಲಿ 8 ಎಲೆಕ್ಟ್ರಾನುಗಳು ಹಾಗೂ 3 ನೇ ಕವಚದಲ್ಲಿ 7  ಎಲೆಕ್ಟ್ರಾನು ಇರುತ್ತವೆ. ಇಲ್ಲಿ ಸೋಡಿಯಂ ತನ್ನ ಕೊನೆಯ ಕವಚದಲ್ಲಿರುವ 1 ಎಲೆಕ್ಟ್ರಾನನ್ನು ಕ್ಲೋರಿನ್ ಗೆ ನೀಡುತ್ತದೆ. ಆಗ ಸೋಡಿಯಂ ನಲ್ಲಿ ಕೊನೆಯ ಕವಚ ಇಲ್ಲವಾಗಿ ಕೇವಲ 2 ಕವಚಗಳು ಮಾತ್ರ ಉಳಿಯುತ್ತವೆ. ಸೋಡಿಯಂ ನ 2ನೇ ಕವಚವೇ ಈಗ ಅದರ ಕೊನೆಯ ಕವಚವಾಗಿರುತ್ತದೆ. ಆ ಕೊನೆಯ ಕವಚದಲ್ಲಿ 8 ಎಲೆಕ್ಟ್ರಾನುಗಳು ಇರುವುದರಿಂದ ಸೋಡಿಯಂ ಸ್ಥಿರವಾಗುತ್ತದೆ. ಹಾಗಯೇ ಕ್ಲೋರಿನ್ ಕೊನೆಯ ಕವಚದಲ್ಲಿದ್ದ 7 ಎಲೆಕ್ಟ್ರಾನುಗಳೊಂದಿಗೆ ಸೋಡಿಯಂ ನಿಂದ ಬಂದ ಒಂದು ಎಲೆಕ್ಟ್ರಾನ್ ಸೇರಿಕೊಂಡು ಒಟ್ಟು 8 ಎಲೆಕ್ಟ್ರಾನುಗಳಾಗಿ ಕ್ಲೋರಿನ್ ಸಹ ಸ್ಥಿರತೆ ಕಾಯ್ದುಕೊಳ್ಳುತ್ತದೆ.

ಪ್ರಮುಖ ಲಕ್ಷಣಗಳು

ಕೋಣೆಯ ತಾಪಮಾನದಲ್ಲಿ ಹರಳು ರೂಪದಲ್ಲಿ ಗಡಸಾಗಿರುತ್ತವೆ.

ದ್ರವ ರೂಪದಲ್ಲಿ ಉತ್ತಮ ವಿದ್ಯುತ್ ವಾಹಕಗಳಾಗಿರುತ್ತವೆ.

ಹೆಚ್ಚಿನ ಕರಗುವ ಬಿಂದು ಮತ್ತು ಕುದಿಬಿಂದುಗಳನ್ನು ಹೊಂದಿರುತ್ತವೆ

ನೀರಿನಲ್ಲಿ ಕರಗುತ್ತವೆ ಆದರೆ ಬೆಂಜಿನ್ ನಲ್ಲಿ ಕರಗುವುದಿಲ್ಲ

ಹೆಚ್ಚಿನ ಸಾಂದ್ರತೆಯನ್ನು ಹೊಂದಿರುತ್ತವೆ ಮತ್ತು ಸ್ಥಿರವಾಗಿರುತ್ತವೆ.

ಕೋವೆಲೆಂಟ್ ಬಂಧ/ಸಹವೇಲೆನ್ಸಿಯ ಬಂಧ

ಅಲೋಹಗಳ ಪರಮಾಣುಗಳಲ್ಲಿ ಒಂದು ಅಥವಾ ಹೆಚ್ಚಿನ ಎಲೆಕ್ಟ್ರಾನುಗಳ ಪರಸ್ಪರ ಹಂಚಿಕೆಯ ಮೂಲಕ 2 ಅಥವಾ ಹೆಚ್ಚಿನ ಪರಮಾಣುಗಳ ನಡುವೆ ಉಂಟಾದ ರಾಸಾಯನಿಕ ಬಂಧವನ್ನು ಸಹವೇಲೆನ್ಸೀಯ ಬಂಧ ಎನ್ನುವರು. ಇದಕ್ಕಿರುವ ಮತ್ತೊಂದು ಹೆಸರು ಅಣುಬಂಧ.

ಎರಡೂ ಪರಮಾಣುಗಳು ಸುಲಭವಾಗಿ ಎಲೆಕ್ಟ್ರಾನುಗಳನ್ನು ಬಿಟ್ಟುಕೊಡದಿದ್ದರೆ ಅವುಗಳ ನಡುವೆ ಸಹವೇಲೆನ್ಸೀಯ ಬಂಧ ಏರ್ಪಡುತ್ತದೆ.

ಹೈಡ್ರೋಜನ್, ಕ್ಲೋರಿನ್, ಮತ್ತು ಹೈಡ್ರೋಜನ್ ಕ್ಲೋರೈಡ್‍ಗಳು ಏಕ ಸಹವೇಲೆನ್ಸೀಯ ಬಂಧ ಉಂಟುಮಾಡುತ್ತವೆ.

ಜಲಜನಕ

ಕ್ಲೋರಿನ್ 

ಆಮ್ಲಜನಕ ದ್ವಿ ಸಹವೇಲೆನ್ಸೀಯ ಬಂಧ ಉಂಟುಮಾಡುತ್ತದೆ.

ಆಮ್ಲಜನಕ 

ನೈಟ್ರೋಜನ್ ತ್ರಿ ಸಹವೇಲೆನ್ಸೀಯ ಬಂಧ ಉಂಟುಮಾಡುತ್ತದೆ.

ನೈಟ್ರೋಜನ್ (ಸಾರಜನಕ)

ಪ್ರಮುಖ ಲಕ್ಷಣಗಳು

ಕೋಣೆಯ ತಾಪಮಾನದಲ್ಲಿ ಮೃದುವಾದ ಘನ ಪದಾರ್ಥ, ದ್ರವ ಅಥವಾ ಅನಿಲ ರೂಪದಲ್ಲಿರುತ್ತವೆ (ವಜ್ರವು ಮಾತ್ರ ಕಠಿಣ ವಸ್ತುವಾಗಿದೆ)

ಸಾಮಾನ್ಯವಾಗಿ ವಿದ್ಯುತ್‍ ಅವಾಹಕಗಳಾಗಿರುತ್ತವೆ (ಗ್ರಾಫೈಟ್ ಮಾತ್ರ ವಿದ್ಯುತ್ ವಾಹಕವಾಗಿದೆ)

ಕಡಿಮೆ ಕರಗುವ ಬಿಂದು ಮತ್ತು ಕುದಿಬಿಂದುವನ್ನು ಹೊಂದಿವೆ

ನೀರಿನಲ್ಲಿ ಕರಗುವುದಿಲ್ಲ ಆದರೆ ಸಾವಯವ ದ್ರಾವಕಗಳಲ್ಲಿ ಕರಗುತ್ತವೆ.

ಕಡಿಮೆ ಸಾಂದ್ರತೆಯನ್ನು ಹೊಂದಿವೆ ಮತ್ತು ಅಸ್ಥಿರವಾಗಿರುತ್ತವೆ.

ಕಾಮೆಂಟ್‌ಗಳು